ಟೋಕಿಯೋ[ಜ.09]: ಜಪಾನ್‌ನ ಉದ್ಯಮಿ ಯುಸಾಕೂ ಮೆಜಾವಾ ಟ್ವೀಟ್ ಒಂದನ್ನು ಮಾಡಿದ್ದು, ಸದ್ಯ ಈ ಕುರಿತಾಗಿ ವಿಶ್ವದಾದ್ಯಂತ ಚರ್ಚೆ ನಡೆಯುತ್ತಿದೆ. ಸದ್ಯ ಅವರು ಮಾಡಿರುವ ಟ್ವೀಟ್ ಅತ್ಯಧಿಕ ರೀಟ್ವೀಟ್ ಆದ ದಾಖಲೆ ನಿರ್ಮಿಸಿದೆ. ಅವರು ಮಾಡಿದ್ದ ಒಂದು ಟ್ವೀಟ್ ಬರೋಬ್ಬರಿ 5.8 ಮಿಲಿಯನ್ ಬಾರಿ ರೀಟ್ವೀಟ್ ಆಗಿದೆ. ಅಷ್ಟಕ್ಕೂ ಜನರೇಕೆ ಈ ಟ್ವೀಟ್ ನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ ಅಂತೀರಾ? ಇಲ್ಲಿದೆ ವಿವರ

ಈ ಉದ್ಯಮಿಯ ಟ್ವೀಟ್ ಶೇರ್ ಮಾಡಿದವರಿಗೆ ಹಣ ಸಿಗುತ್ತದೆ ಹೀಗಾಗಿಯೇ ಜನರು ಇದನ್ನು ಶೇರ್ ಮಾಡುತ್ತಿದ್ದಾರೆ. ಕೋಟ್ಯಾಧಿಪತಿಯಾಗಿರುವ ಯುಸಾಕೂ ಮೆಜಾವಾ ಜನವರಿ 5 ರಂದು ಟ್ವೀಟ್ ಒಂದರಲ್ಲಿ ತನ್ನ ಟ್ವೀಟ್ ರೀಟ್ವೀಟ್ ಮಾಡಿ, ಅಕೌಂಟ್ ಫಾಲೋ ಮಾಡುವ 100 ಅದೃಷ್ಟಶಾಲಿಗಳಿಗೆ 100ಮಿಲಿಯನ್ ಎನ್[6 ಕೋಟಿರೂಪಾಯಿಗಿಂತಲೂ ಹೆಚ್ಚು] ಬಹುಮಾನವಾಗಿ ವಿತರಿಸಲಾಗುತ್ತದೆ ಎಂದು ಘೋಷಿಸಿದ್ದಾರೆ. ಈ ಸಂದೇಶ ಹಾಕಿದ ಕೆಲವೇ ಗಂಟೆಗಳಲ್ಲಿ ಇದು ಭಾರೀ ವೈರಲ್ ಆಗಿದೆ.

ಯುಸಾಕೂ ಮೆಜಾವಾ ಅತಿ ದೊಡ್ಡ ಆನ್ ಲೈನ್ ಫ್ಯಾಷನ್ ರಿಟೇಲರ್ ಜೆಜೊಟೌನ್ ಸಂಸ್ಥಾಪಕರು. ಅವರು ತಮ್ಮ ಅಕೌಂಟ್ ನಲ್ಲಿ ಟ್ವೀಟ್ ಮಾಡುತ್ತಾ 'ಜೊಜೊಟೌನ್ ಹೊಸ ವರ್ಷದ ಪ್ರಯುಕ್ತ ಆಯೋಜಿಸಿದ್ದ ಸೇಲ್ ಇತಿಹಾಸದಲ್ಲೇ ಅತಿದೊಡ್ಡ ಸೇಲ್ ಆಗಿತ್ತು ಹಾಗೂ ಈವರೆಗೂ ನಾವು 100ಮಿಲಿಯನ್ ಎನ್[6.5 ಕೋಟಿಗೂ ಅಧಿಕ] ಮೊತ್ತದ ವಸ್ತುಗಳನ್ನು ಮಾರಾಟ ಮಾಡಿದ್ದೇವೆ. ಇದಕ್ಕಾಗಿ ಧನ್ಯವಾದ ಸಲ್ಲಿಸುತ್ತಾ ಈ 100 ಮಿಲಿಯನ್ ಎನ್ ಮೊತ್ತವನ್ನು 100 ಮಂದಿ ಅದೃಷ್ಟಶಾಲಿಗಳಿಗೆ ನೀಡುತ್ತೇನೆ. ಈ ಮೊತ್ತ ತಮ್ಮದಾಗಿಸಿಕೊಳ್ಳಲು ನೀವು ನನ್ನ ಟ್ವಿಟರ್ ಖಾತೆಯನ್ನು ಫಾಲೋ ಮಾಡುವುದರೊಂದಿಗೆ, ಈ ಟ್ವೀಟ್‌ನ್ನು ರೀಟ್ವೀಟ್ ಮಾಡಬೇಕಾಗುತ್ತದೆ' ಎಂದು ಬರೆದುಕೊಂಡಿದ್ದಾರೆ.

ಯುಸಾಕೂ ಮೆಜಾವಾ ಜಗತ್ತಿನ ಯಶಸ್ವೀ ಉದ್ಯಮಿಗಳಲ್ಲಿ ಒಬ್ಬರು. ಬ್ಯುಸಿನೆಸ್ ಜೊತೆಗೆ ಅವರು ಕಲೆಕ್ಷನ್ ವಿಚಾರಕ್ಕೂ ಫೇಮಸ್ ಆಗಿದ್ದಾರೆ. ಅವರ ಬಳಿ ಪಿಕಾಸೋ ಪೇಂಟಿಂಗ್ ನಿಂದ ಬುಗಾತಿಯ ಸೂಪರ್ ಕಾರು ಹೀಗೆ ಎಲ್ಲವೂ ಇದೆ. ಚಂದ್ರನ ಅಂಗಳಕ್ಕೆ ಹೋಗಲು ಅವರು ಈಗಾಗಲೇ ಟಿಕೆಟ್ ಕೂಡಾ ಖರೀದಿಸಿದ್ದಾರೆ. ಅವರನ್ನು 2023ರಲ್ಲಿ ಚಂದ್ರಯಾನಕ್ಕೆ ತೆರಳಲಿರುವ ರಾಕೆಟ್ ನ ಮೊದಲ ಪ್ರಯಾಣಿಕ ಎನ್ನಲಾಗುತ್ತದೆ. 10 ವರ್ಷಗಳಲ್ಲಿ ಅವರು ಉದ್ಯಮವನ್ನು ಅತಿ ಎತ್ತರಕ್ಕೊಯ್ದಿದ್ದಾರೆ. ಅವರು ಡಿಸೈನ್ ಮಾಡುವ ಉಡುಪುಗಳು ಜಪಾನ್ ನಲ್ಲಿ ಸುಪ್ರಸಿದ್ಧವಾಗಿವೆ.