ಮೈಸೂರು ವಿವಿಯ ಕ್ರಾರ್ಡ್ ಭವನದಲ್ಲಿ ಮಂಗಳವಾರ ನಡೆದ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಬೀಳ್ಕೊಡುಗೆ ಸಮಾರಂಭ ರಾಜಕೀಯ ಧ್ರುವೀಕರಣಕ್ಕೆ ಮುಹೂರ್ತ ಫಿಕ್ಸ್ ಮಾಡಿದಂತೆಯೇ ಕಂಡುಬಂತು.

ಮೈಸೂರು(ಜ.10): ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಧ್ರುವೀಕರಣವಾಗಬಹುದೆ? ಇಂಥದ್ದೊಂದು ಸುಳಿವು ನೀಡುವ ಮೂಲಕ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಜನತಾ ಪರಿವಾರದ ಹಳೇ ಸದಸ್ಯ ಸಿ.ಎಂ. ಇಬ್ರಾಹಿಂ ಜನರ ಹುಬ್ಬೇರಿಸಿದ್ದಾರೆ.

ಮೈಸೂರು ವಿವಿಯ ಕ್ರಾರ್ಡ್ ಭವನದಲ್ಲಿ ಮಂಗಳವಾರ ನಡೆದ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಬೀಳ್ಕೊಡುಗೆ ಸಮಾರಂಭ ರಾಜಕೀಯ ಧ್ರುವೀಕರಣಕ್ಕೆ ಮುಹೂರ್ತ ಫಿಕ್ಸ್ ಮಾಡಿದಂತೆಯೇ ಕಂಡುಬಂತು. ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ, ಈಗ ಅನ್ಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ‘ಗುರು- ಶಿಷ್ಯರು’ ರಾಜ್ಯದ ಜನರಿಗೆ ಸೂಕ್ಷ್ಮ ಸಂದೇಶ ರವಾನಿಸಿದ್ದಾರೆ. ತಮ್ಮ ಭಾಷಣ ಬಂದಾಗ ಪರಸ್ಪರ ಇಬ್ಬರೂ ನಾಯಕರು ಮುಂದಿನ ರಾಜಕೀಯ ಸೋಗನ್ನು ತಳಕು ಹಾಕಿಯೇ ಮಾತನಾಡಿ ಒಮ್ಮತದ ನಿರ್ಧಾರ ಪ್ರಕಟಣೆಗೆ ‘ಇನ್ನೂ ಸ್ವಲ್ಪ ದಿನಗಳು ಕಾಯಿರಿ’ ಎಂಬ ಅಭಯವನ್ನಷ್ಟೇ ನೀಡಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಾತನಾಡಿ, ‘‘ನನ್ನ ಸ್ನೇಹಿತ ಸಿ.ಎಂ. ಇಬ್ರಾಹಿಂ ಯಾಕೋ ನಿರಾಶರಾದಂತೆ ಕಂಡುಬರುತ್ತಾರೆ. ಆದರೆ ಅವರು ನಿರಾಶರಾಗುವ ಅಗತ್ಯವಿಲ್ಲ. 19 ವರ್ಷ ಕಾಂಗ್ರೆಸ್‌ನಲ್ಲಿದ್ದವರು ಆಕಸ್ಮಿಕವಾಗಿ ನನ್ನ ಜತೆ ಬಂದು ಕೇಂದ್ರದಲ್ಲಿ ಆಡಳಿತ ನಡೆಸಿದ್ದೀರಿ. ಯಾವುದೇ ಕಾರಣಕ್ಕೂ ನಿರಾಶರಾಗುವುದು ಬೇಡ’’ ಎಂದು ಹೇಳಿದರು.

ಬಳಿಕ ಮಾತನಾಡಿದ ಇಬ್ರಾಹಿಂ, ‘‘ನನ್ನ 45 ವರ್ಷದ ರಾಜಕೀಯದಲ್ಲಿ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ದೇವೇಗೌಡರನ್ನು ಮರೆಯುವುದಿಲ್ಲ. ನಾನು ಎಂದೂ ಹೊಸ ಕಾರು ಖರೀದಿಸಲು ಹೋಗಲ್ಲ. ಹೇಳಿಕೇಳಿ ನಾನು ಸಾಬಿ, ಏನಿದ್ದರೂ ಗುಜುರಿಗೆ ಹೋಗಿ ಹಳೇ ಕಾರಿನ ಸ್ಪೇರ್ ಪಾರ್ಟ್ಸ್‌ಗಳನ್ನು ತಂದು ಪರ್ಪೆಕ್ಟ್ ಕಾರು ಮಾಡುತ್ತೇವೆ. ಗ್ಯಾರಂಟಿ, ವಾರಂಟಿ ನಾವೇ ನೀಡುವುದರಿಂದ ಯಾವುದನ್ನು ಎಲ್ಲಿ ಟೈಟ್ ಮಾಡಬೇಕು, ಎಲ್ಲಿ ಲೂಸ್ ಮಾಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಸಂಕ್ರಾಂತಿ ಮುಗಿಯಲೆಂದು ನಾನು ಕಾಯುತ್ತಿದ್ದೇನೆ’’ ಎನ್ನುವ ಮೂಲಕ ಜನತಾ ಪರಿವಾರ ಒಗ್ಗೂಡುವಿಕೆಯ ಸುಳಿವು ನೀಡಿದರು.

ದೇವೇಗೌಡ ಸಂಬಂಧಿ ರಂಗಪ್ಪಗೆ ಆಹ್ವಾನ ನೀಡಿದ ಇಬ್ರಾಹಿಂ

ದೇವೇಗೌಡರ ಅಳಿಯ ಡಾ.ಸಿ.ಎನ್. ಮಂಜುನಾಥ್ ಅವರ ಬೀಗರೂ ಆದ ಪ್ರೊ.ಕೆ.ಎಸ್. ರಂಗಪ್ಪ ಅವರಿಗೆ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ರಾಜಕೀಯಕ್ಕೆ ಬರುವಂತೆ ಆಹ್ವಾನ ನೀಡಿದರು. ‘‘ರಂಗಪ್ಪನವರೇ ನೀವು ಬೇರೆ ಕಡೆ ಪಾಠ ಮಾಡಲು ಹೋಗಬೇಡಿ. ದಯವಿಟ್ಟು ರಾಜಕೀಯಕ್ಕೆ ಬನ್ನಿ. ರಾಜಕೀಯದಲ್ಲಿರುವ ಪಾರ್ಕಿನ್ಸನ್, ಕ್ಯಾನ್ಸರ್‌ಗಳಿಗೆ ಔಷಧ ಹುಡುಕಿ. 1995ರಲ್ಲಿ ದೇವೇಗೌಡರ ಪಿಎಂ ಆಗುತ್ತಾರೆ ಎಂದಿದ್ದೆ 1996ರಲ್ಲಿ ಆದರು, ಅದೇ ರೀತಿ ಸಿದ್ದರಾಮಯ್ಯಗೂ ಸಿಎಂ ಆಗುತ್ತೀಯಾ ಎಂದಿದ್ದೆ. ಈಗ ನೀವು ರಾಜಕೀಯ ಪ್ರವೇಶಿಸಿ ಎನ್ನುತ್ತಿದ್ದೇನೆ. ಖಂಡಿತಾ ಇದು ಆಗಿಯೇ ಆಗುತ್ತದೆ. ವಿಧಾನಸೌಧಕ್ಕೆ ಬಂದು ಆಡಳಿತ ನಡೆಸಿ. ನೀವು ಏನೆ ನಿರ್ಧಾರ ತೆಗೆದುಕೊಂಡರೂ ನಿಮ್ಮ ಪತ್ನಿ ನಿಮಗೆ ಚಾರ್ಜ್ ಮಾಡಿಯೇ ಕಳುಹಿಸುತ್ತಾರೆ’’ ಎಂದು ಇಬ್ರಾಹಿಂ ಸ್ವಾರಸ್ಯಕರವಾಗಿ ಆಹ್ವಾನ ನೀಡಿದರು.

ನಾನು ಪ್ರಧಾನಿಯಾಗಿದ್ದಾಗ 6 ಬಾರಿ ಜಮ್ಮು- ಕಾಶ್ಮೀರಕ್ಕೆ ಹೋಗಿ ಬಂದೆ. ಆದರೆ ಇಷ್ಟು ಪ್ರಚಾರ ಪಡೆಯಲಿಲ್ಲ. ಹುಬ್ಬಳ್ಳಿಯ ಈದ್ಗಾ ಮೈದಾನದ ಸಮಸ್ಯೆಯನ್ನೂ ಬಗೆಹರಿಸಿದೆ.

- ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ

ದೇವೇಗೌಡರು ಇದ್ದಿದ್ದಕ್ಕೆ ಹುಬ್ಬಳ್ಳಿಯ ಈದ್ಗಾ ಮೈದಾನ ಸಮಸ್ಯೆ ಬಗೆಹರಿಯಿತು. ಇನ್ನೊಂದು ವರ್ಷ ಅವರು ಪ್ರಧಾನಿಯಾಗಿದ್ದರೆ ಅಯೋಧ್ಯೆಯ ರಾಮ ಮಂದಿರ ಸಮಸ್ಯೆ ಬಗೆಹರಿಯುತ್ತಿತ್ತು.

- ಸಿ.ಎಂ. ಇಬ್ರಾಹಿಂ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ