ಬೆಂಗಳೂರು [ಜು.04] :  ಆ್ಯಂಬಿಡೆಂಟ್‌ ಬಹುಕೋಟಿ ವಂಚನೆ ಪ್ರಕರಣ ಮತ್ತು ಓಬಳಾಪುರಂ ಮೈನಿಂಗ್‌ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು.

ಶಾಂತಿನಗರದಲ್ಲಿನ ಇಡಿ ಕಚೇರಿಗೆ ಮಧ್ಯಾಹ್ನ 3ಗಂಟೆ ಸುಮಾರಿಗೆ ತೆರಳಿದ ಜನಾರ್ದನ ರೆಡ್ಡಿ ಸುಮಾರು ನಾಲ್ಕು ತಾಸುಗಳ ಕಾಲ ವಿಚಾರಣೆಗೊಳಗಾದರು. ಇಡಿ ಅಧಿಕಾರಿಗಳು ಸಮನ್ಸ್‌ ಜಾರಿ ಮಾಡಿದ್ದರಿಂದ ಜನಾರ್ದನ ರೆಡ್ಡಿ ವಿಚಾರಣೆಗೆ ಹಾಜರಾದರು. ಆ್ಯಂಬಿಡೆಂಟ್‌ ಬಹುಕೋಟಿ ವಂಚನೆ ಪ್ರಕರಣ ಮತ್ತು ಓಬಳಾಪುರಂ ಮೈನಿಂಗ್‌ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧಿಸಿದಂತೆ ಹಲವು ಮಹತ್ವದ ಮಾಹಿತಿಯನ್ನು ಇಡಿ ಅಧಿಕಾರಿಗಳು ಪಡೆದುಕೊಂಡರು ಎಂದು ಹೇಳಲಾಗಿದೆ.

ವಿಚಾರಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜನಾರ್ದನ ರೆಡ್ಡಿ, ಓಬಳಾಪುರಂ ಮೈನಿಂಗ್‌ ಕಂಪನಿಯ ಪ್ರಕರಣ ಸಂಬಂಧ ವಿಚಾರಣೆ ನಡೆಯಿತು. ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಕೆಲವು ದಾಖಲೆ ಹಾಗೂ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅದನ್ನು ಹಿಂದಿರುಗಿಸುವಂತೆ ಸುಪ್ರೀಂಕೋರ್ಟ್‌ ಆದೇಶಿಸಿದೆ. ಇದಕ್ಕಾಗಿ ಕಾನೂನು ಹೋರಾಟ ನಡೆಸಲಾಗಿದೆ. ಆಸ್ತಿಯನ್ನು ಬಿಡುಗಡೆ ಮಾಡದಿದ್ದಲ್ಲಿ ಇಡಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ಆ್ಯಂಬಿಡೆಂಟ್‌ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಇಡಿ ಅಧಿಕಾರಿಗಳು ಈಗಾಗಲೇ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ಹೊಸದೇನಲ್ಲ. ಆಗಾಗ್ಗೆ ವಿಚಾರಣೆಗೆ ಬರುತ್ತಿರುತ್ತೇನೆ. ಮಾಧ್ಯಮಗಳಿಗೆ ಇವತ್ತು ಕಂಡಿದ್ದೇನೆ ಅಷ್ಟೆಎಂದ ಅವರು, ರಾಜಕೀಯ ಕುರಿತು ಮಾತನಾಡಲು ನಿರಾಕರಿಸಿದರು.