ಬೆಂಗಳೂರು[ಸೆ.10]: ರಾಜಕೀಯ ಕಾರಣಗಳಿಗಾಗಿ ಹಲವು ವರ್ಷಗಳಿಂದ ದೂರವಿದ್ದ ಹೊಸಪೇಟೆಯ ಕಾಂಗ್ರೆಸ್‌ ಅನರ್ಹ ಶಾಸಕ ಆನಂದಸಿಂಗ್‌, ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಕಾರ್ಯಕ್ರಮವೊಂದರಲ್ಲಿ ಒಟ್ಟಾಗಿ ಭಾಗವಹಿಸುವ ಮೂಲಕ ರಾಜಕೀಯವಾಗಿ ನಾವೆಲ್ಲರೂ ಒಂದಾಗಿದ್ದೇವೆ, ಮುನಿಸು ಮರೆತಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.

ಆನಂದ್‌ ಸಿಂಗ್‌ ಅವರ ಪುತ್ರ ಸಿದ್ದಾರ್ಥ ಹಾಗೂ ಸಂಜನಾ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರಿನಲ್ಲಿ ಭಾನುವಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ, ಶ್ರೀರಾಮುಲು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿ ಬಿಜೆಪಿಯ ಹಲವು ಗಣ್ಯರು ಭಾಗಿಯಾಗಿದ್ದಾರೆ.

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಳಿಕ ಆನಂದ್‌ ಸಿಂಗ್‌ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿತ್ತು. ಇದೀಗ ಆನಂದ್‌ಸಿಂಗ್‌ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದರಿಂದ ಸಿಂಗ್‌ ಬಿಜೆಪಿ ಸೇರ್ಪಡೆಯ ಮಾತುಗಳಿಗೆ ಮತ್ತಷ್ಟು ಬಲ ಬಂದಿದೆ.