ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವೈಭವೋಪೇತ ಮದುವೆ ಸಮಾರಂಭವು ದೇಶಾದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಮದುವೆಗೆ ಸುಮಾರು ನೂರಾರು ಕೋಟಿ ರೂ.ಗಳನ್ನು ವ್ಯಯಮಾಡಲಾಗಿದೆ ಎಂದು ಅಂದಾಜಿಸಲಾಗಿತ್ತು. 

ಬೆಂಗಳೂರು (ಜ.12): ಕಳೆದ ನವೆಂಬರ್’ನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಿದ ಮಗಳ ವಿವಾಹ ಸಮಾರಂಭಕ್ಕೆ ತಾನು ಖರ್ಚು ಮಾಡಿರುವುದು ಕೇವಲ ರೂ.30 ಕೋಟಿ ಮಾತ್ರವೆಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಬಹಿರಂಗ ಪಡಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಗೆ ಹಣಕಾಸಿನ ವಿವರ ನೀಡಿದ ಜನಾರ್ದನ ರೆಡ್ಡಿ, ಪುತ್ರಿ ಬ್ರಹ್ಮಿಣಿ ಮದುವೆಗೆ ರೂ. 30 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಿರುವುದಾಗಿ ಹೇಳಿದ್ದಾರೆ.

ಕಳೆದ ನ.16 ರಿಂದ 5 ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವೈಭವೋಪೇತ ಮದುವೆ ಸಮಾರಂಭವು ದೇಶಾದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಮದುವೆಗೆ ಸುಮಾರು ನೂರಾರು ಕೋಟಿ ರೂ.ಗಳನ್ನು ವ್ಯಯಮಾಡಲಾಗಿದೆ ಎಂದು ಅಂದಾಜಿಸಲಾಗಿತ್ತು. 

ರೆಡ್ಡಿ ತನ್ನ ಮಗಳ ಮದುವೆಗೆ 600 ಕೋಟಿ ಹಣ ಖರ್ಚು ಮಾಡಿರುವುದಾಗಿ ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ನರಸಿಂಹಮೂರ್ತಿ ಎಂಬವರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದರು. ಬಳಿಕ ಜನಾರ್ದನ ರೆಡ್ಡಿಯ ಬಳ್ಳಾರಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ನ.8 ರಂದು ಕೇಂದ್ರ ಸರ್ಕಾರ ನೋಟು ಅಮಾನ್ಯ ಕ್ರಮವನ್ನು ಘೋಷಿಸಿದ ಬಳಿಕ, ನಗದು ಹಣಕ್ಕಾಗಿ ಸಾಮಾನ್ಯ ಜನತೆ ಪರದಾಡುತ್ತಿರುವಾಗ, ರೆಡ್ಡಿ ಬಳಿ ಅಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆಗಳು ಎದ್ದಿದ್ದವು. ಕ್ರೆಡಿಟ್, ಡೆಬಿಟ್ ಕಾರ್ಡ್ ಮತ್ತು ನಗದು ರೂಪದಲ್ಲಿ ಹಣ ಪಾವತಿ ಮಾಡಿರುವ ದಾಖಲೆಗಳನ್ನು ರೆಡ್ಡಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ್ದಾರೆ.