ಬೆಂಗಳೂರು [ಸೆ.13]: ಇಂಡಿಯನ್‌ ಮೈನ್ಸ್‌ ಕಂಪನಿ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದ ಸಂಬಂಧ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧದ ಆರೋಪಗಳನ್ನು ಕೈಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಪ್ರಕರಣದ ಸಂಬಂಧ ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡಲು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಅವರ ಆಪ್ತ ಕೆ.ಅಲಿಖಾನ್‌ ಮತ್ತು ಬಿ.ವಿ.ಶ್ರೀನಿವಾಸ ರೆಡ್ಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಗುರುವಾರ ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಲೋಕಾಯುಕ್ತ ವಿಶೇಷ ತನಿಖಾ ತಂಡ ಮತ್ತು 2015ರಲ್ಲಿ ಲೋಕಾಯುಕ್ತ ವಿಶೇಷ ತನಿಖಾ ವಿಭಾಗದ ಪೊಲೀಸ್‌ ಅಧೀಕ್ಷಕರಾಗಿದ್ದ ಕೌಶಲೇಂದ್ರ ಕುಮಾರ್‌ ಅವರಿಗೆ ನೋಟಿಸ್‌ ಜಾರಿ ಮಾಡಿದೆ.

ಪ್ರಕರಣವೇನು?:  ಎನ್‌. ಶೇಖ್‌ ಸಾಬ್‌ ಎಂಬುವವರಿಗೆ ಸೇರಿದ ಇಂಡಿಯನ್‌ ಮೈನ್ಸ್‌ ಸಂಸ್ಥೆಯನ್ನು ಸುಪರ್ದಿಗೆ ಪಡೆದು ಅಕ್ರಮವಾಗಿ ಕಬ್ಬಿಣದ ಅದಿರು ತೆಗೆದು, ಸಾಗಣೆ ಹಾಗೂ ಮಾರಾಟ ಮಾಡಿದ ಆರೋಪ ಸಂಬಂಧ ಲೋಕಾಯುಕ್ತ ಪೊಲೀಸರು 2015ರ ಸೆಪ್ಟಂಬರ್‌ 7ರಂದು ಪ್ರಕರಣ ದಾಖಲಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಲೋಕಾಯುಕ್ತ ವಿಶೇಷ ತನಿಖಾ ತಂಡದ ಪೊಲೀಸ್‌ ಅಧೀಕ್ಷಕ ಕೌಶಲೇಂದ್ರ ಕುಮಾರ್‌ ಅವರ ನೇತೃತ್ವದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ತನಿಖೆ ನಡೆಸಿ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-1957ರ ಸೆಕ್ಷನ್‌ 21,23 ಮತ್ತು 4(ಎ) 4(1ಎ) ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 379, 420, 120(ಬಿ) ಮತ್ತು ಕರ್ನಾಟಕ ಅರಣ್ಯ ಅಧಿನಿಯಮಗಳು-1969ರ ಸೆಕ್ಷನ್‌ 165 ಮತ್ತು 144 ಅಡಿ ದೋಷಾರೋಪ ಪಟ್ಟಿಸಲ್ಲಿಸಿದ್ದರು.

ದೋಷರೋಪ ಪಟ್ಟಿಯಲ್ಲಿ ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಕೈ ಬಿಡುವಂತೆ ಕೋರಿ ಆರೋಪಿಗಳಾಗಿರುವ ಜನಾರ್ದನ ರೆಡ್ಡಿ, ಅಲಿಖಾನ್‌ ಮತ್ತು ಶ್ರೀನಿವಾಸ ರೆಡ್ಡಿ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು 2019ರ ಜುಲೈ 17ರಂದು ನ್ಯಾಯಾಲಯವು ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೂವರು ಆರೋಪಿಗಳು ಪ್ರತ್ಯೇಕ ಕ್ರಿಮಿನಲ್‌ ಅರ್ಜಿಗಳನ್ನು ಸಲ್ಲಿಸಿದ್ದಾರೆ.