ನವದೆಹಲಿ[ಆ.06]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವುದು ಅಂದುಕೊಂಡಿರುವಷ್ಟುಸುಲಭದ ಹಾದಿಯಾಗಿರಲಿಲ್ಲ. ಯಾಕೆಂದರೆ, ಕಾಶ್ಮೀರಕ್ಕಾಗಿಯೇ ಇದ್ದ ಪ್ರತ್ಯೇಕ ಸಂವಿಧಾನ ತಿದ್ದುಪಡಿಗೊಳ್ಳುವುದು ಏನಿದ್ದರೂ ಅದು ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಮಾತ್ರವೇ. ಹಾಗಾಗಿ, ಕೇಂದ್ರ ಸರ್ಕಾರಕ್ಕೆ ಇದರ ಅಧಿಕಾರವಿರಲಿಲ್ಲ.

ಆದರೆ, ಜಮ್ಮು-ಕಾಶ್ಮೀರವನ್ನು ದೇಶದಲ್ಲಿ ವಿಲೀನ ಮಾಡಿಕೊಳ್ಳುವ ವೇಳೆ ಮಾಡಿಕೊಂಡ ಷರತ್ತಿನಂತೆ ರಕ್ಷಣೆ, ವಿದೇಶಾಂಗ ವ್ಯವಹಾರ, ಹಣಕಾಸು ಹಾಗೂ ಸಂವಹನಗಳ ಕುರಿತು ಇರುವ ಕಾಯ್ದೆಗಳನ್ನು ಮಾತ್ರವೇ ಸಂಸತ್ತಿನಲ್ಲಿ ತಿದ್ದುಪಡಿ ಮಾಡಬಹುದಾಗಿತ್ತು.

ಆಪರೇಷನ್ ಕಾಶ್ಮೀರ, ಆರ್ಟಿಕಲ್ 370 ರದ್ದು: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೋಮವಾರದ ಸಂಸತ್ತಿನ ಕಲಾಪದಲ್ಲಿ ಕೇವಲ 3 ನಿಮಿಷಗಳಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿತು. ಸೋಮವಾರ ಬೆಳಗ್ಗೆ 11.27ಕ್ಕೆ ಈ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಅವರು ಘೋಷಣೆ ಮಾಡಿದರು.

11.28ಕ್ಕೆ ಈ ಕುರಿತಾದ ಪ್ರಸ್ತಾಪನೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅಂಕಿತ ಹಾಕಿದರು. 11.29ಕ್ಕೆ ಈ ಸಂಬಂಧದ ಅಧಿಸೂಚನೆ ಪ್ರಕಟ ಹಾಗೂ 11.30ಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತಾದ ಸುದ್ದಿ ಕ್ಷಣ ಮಾತ್ರದಲ್ಲಿ ಬಿರುಗಾಳಿಯಂತೆ ದೇಶವನ್ನೇ ವ್ಯಾಪಿಸಿದ್ದು. ಅಲ್ಲದೆ, ಇಂಥ ಮಹತ್ವದ ನಿರ್ಣಯ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿನಂದನೆಗಳ ಮಹಾಪೂರ.

ಘೋಷಣೆಯಾಗಿದ್ದು 11.27ಕ್ಕೆ

ರಾಷ್ಟ್ರಪತಿ ಅಂಕಿತ 11.28ಕ್ಕೆ

ಅಧಿಸೂಚನೆ ಪ್ರಕಟ 11.29ಕ್ಕೆ