ನಟ ಜಗ್ಗೇಶ್ ಹಾಗೂ ಸಾ ರಾ ಗೋವಿಂದು ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ತಮಿಳಿನ ಚಿತ್ರವನ್ನು ಡಬ್ ಮಾಡಿ ಬಿಡುಗಡೆಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಲಕ್ಷಾಂತರ ರು ದಂಡ ವಿಧಿಸಲಾಗಿದೆ.
ನವದೆಹಲಿ : ‘ಸತ್ಯದೇವ್ ಐಪಿಎಸ್’ ಸಿನಿಮಾವನ್ನು ತಮಿಳಿನಿಂದ ಕನ್ನಡಕ್ಕೆ ಡಬ್ ಮಾಡಿ ಪ್ರದರ್ಶಿಸಲು ವಿರೋಧ ವ್ಯಕ್ತಪಡಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಟ ಜಗ್ಗೇಶ್, ನಿರ್ಮಾಪಕ, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಅವರಿಗೆ ಭಾರತೀಯ ಸ್ಪರ್ಧಾತ್ಮಕ ಆಯೋಗವು ದಂಡ ವಿಧಿಸಿದೆ. ಪ್ರಕರಣದಲ್ಲಿ ಕನ್ನಡ ಒಕ್ಕೂಟ ಮತ್ತು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆದಾಯದ ವಿವರ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಆಯೋಗ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಿದೆ.
ಕನ್ನಡದಲ್ಲಿ ಡಬ್ ಸಿನಿಮಾಗಳ ಪ್ರದರ್ಶನಕ್ಕೆ ಸ್ಪರ್ಧಾತ್ಮಕ ಅಯೋಗ ಅನುಮತಿ ನೀಡಿದ್ದರೂ ತಮಿಳು ನಟ ಅಜಿತ್ ನಟಿಸಿರುವ ‘ಸತ್ಯದೇವ್ ಐಪಿಎಸ್’ ಸಿನಿಮಾವನ್ನು 2017ರ ಮಾರ್ಚ್ ನಲ್ಲಿ ಬಿಡುಗಡೆ ಮಾಡಲು ಮುಂದಾದಾಗ ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳು ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದು, ಇದು ಸ್ಪರ್ಧಾತ್ಮಕ ಕಾನೂನಿನ ಉಲ್ಲಂಘನೆ ಎಂದು ಸಿನಿಮಾದ ನಿರ್ಮಾಪಕ ಜಿ.ಕೃಷ್ಣಮೂರ್ತಿ ಸ್ಪರ್ಧಾತ್ಮಕ ಆಯೋಗದ ಮೊರೆ ಹೋಗಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗದ ಮುಖ್ಯಸ್ಥ ಸುಧೀರ್ ಮಿತ್ತಲ್, ಸದಸ್ಯರಾದ ಆಗಸ್ಟಿನ್ ಪೀಟರ್, ಯು.ಸಿ. ನಹ್ಟಾ, ನ್ಯಾ.ಜಿ.ಪಿ. ಮಿತ್ತಲ್ ಅವರನ್ನೊಳಗೊಂಡ ಸಮಿತಿಯು ವಾಣಿಜ್ಯ ಮಂಡಳಿಗೆ .9,72,943, ಜಗ್ಗೇಶ್‌ಗೆ .2,71,286 ಮತ್ತು ಸಾ.ರಾ.ಗೋವಿಂದುಗೆ .15,151 ದಂಡ ವಿಧಿಸಿದೆ. 2014ರಿಂದ 2017ರ ತನಕದ ಮೂರು ಹಣಕಾಸು ವರ್ಷಗಳ ಆದಾಯದ ಸರಾಸರಿಯನ್ನು ಪರಿಗಣಿಸಿ ಅದರ ಮೇಲೆ ಶೇ.10ರಷ್ಟುದಂಡ ವಿಧಿಸಲಾಗಿದೆ. ದಂಡ ಕಟ್ಟಲು ಆದೇಶ ಕೈಸೇರಿದ ಬಳಿಕ 60 ದಿನಗಳ ಸಮಯವನ್ನೂ ಆಯೋಗ ನೀಡಿದೆ.
ಕನ್ನಡ ಒಕ್ಕೂಟ ಮತ್ತು ವಾಟಾಳ್ ನಾಗರಾಜ್ ಅವರಿಗೆ ಸೂಕ್ತ ಅವಕಾಶಗಳನ್ನು ನೀಡಿದ ಬಳಿಕವೂ ತಮ್ಮ ಆದಾಯದ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಆದೇಶ ನೀಡಲಾಗುವುದು ಎಂದು ಆಯೋಗ ಹೇಳಿದೆ.
‘ಸತ್ಯದೇವ್ ಐಪಿಎಸ್’ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ಪತ್ರಿಕಾಗೋಷ್ಠಿ ಆಯೋಜನೆ ಸೇರಿದಂತೆ ಸಿನಿಮಾ ಪ್ರದರ್ಶನದ ವಿರುದ್ಧ ನೀಡಿದ್ದ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ ಜಗ್ಗೇಶ್, ಗೋವಿಂದು ಮತ್ತು ವಾಟಾಳ್ ವಿರುದ್ಧ ಕಿಡಿಕಾರಿದೆ.
