Asianet Suvarna News Asianet Suvarna News

ಬಿಗ್ ನ್ಯೂಸ್; ಬಿಜೆಪಿಯತ್ತ ಜಾಫರ್ ಷರೀಫ್?

ರಾಜಕೀಯ ಜೀವನದ ಆರಂಭದಿಂದಲೂ ಬಲಪಂಥೀಯರನ್ನು ಕಟುವಾಗಿ ಟೀಕಿಸಿಕೊಂಡು ಬಂದಿದ್ದ ಜಾಫರ್ ಷರೀಫ್ ಅವರು ತಮ್ಮ ವಿಚಾರಧಾರೆಯನ್ನು ಬದಲಿಸಿಕೊಂಡಿರುವುದು ಇಲ್ಲಿ ಗಮನಾರ್ಹ.

jaffer sharief on rss chief mohan bhagawat

ಬೆಂಗಳೂರು(ಏ. 01): ಎಸ್ಸೆಮ್ ಕೃಷ್ಣ ನಂತರ ಇನ್ನಷ್ಟು ಹಿರಿಯ ಕಾಂಗ್ರೆಸ್ ಮುಖಂಡರು ಕೇಸರಿಪಾಳಯಕ್ಕೆ ಜಿಗಿಯಲಿದ್ದಾರೆಯೇ? ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ರೈಲ್ವೆ ಸಚಿವ ಜಾಫರ್ ಷರೀಫ್ ಅವರು ಬಿಜೆಪಿಯತ್ತ ವಾಲುತ್ತಿರುವ ಸೂಚನೆ ಕಾಣುತ್ತಿದೆ. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ರಾಷ್ಟ್ರಪತಿ ಹುದ್ದೆಗೆ ಸೂಕ್ತ ಎಂದು ಜಾಫರ್ ಷರೀಫ್ ಅಭಿಪ್ರಾಯಪಟ್ಟಿರುವುದು ಮೇಲಿನ ಸುದ್ದಿಗೆ ಪುಷ್ಟಿ ನೀಡುವಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾವು ಬರೆದಿರುವ ಪತ್ರದಲ್ಲಿ ಮೋಹನ್ ಭಾಗವತ್ ವಿಚಾರವನ್ನು ಷರೀಫ್ ಪ್ರಸ್ತಾಪಿಸಿದ್ದಾರೆನ್ನಲಾಗಿದೆ. ಆರೆಸ್ಸೆಸ್ ಸರಸಂಘಚಾಲಕರು ರಾಷ್ಟ್ರಪತಿಯಾಗುವುದಾದರೆ, ತಮ್ಮದೇನು ಅಭ್ಯಂತರವಿಲ್ಲ ಎಂಬರ್ಥದಲ್ಲಿ ಷರೀಫ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

"ಮೋಹನ್ ಭಾಗವತ್ ಅವರ ರಾಷ್ಟ್ರಪ್ರೇಮ, ಹಾಗೂ ದೇಶದ ಜನರೆಡೆಗಿನ ಅವರ ಪ್ರೀತಿ ಪ್ರಶ್ನಾತೀತ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅವರಿಗೆ ಬದ್ಧತೆ ಇದೆ. ಬಾಂಗ್ಲಾ ಯುದ್ಧದ ಸಮಯದಲ್ಲಿ ಅಂದಿನ ಪ್ರಧಾನಿ ಇಂದಿರಾ ಅವರಿಗೆ ಆರೆಸ್ಸೆಸ್ ಬೆಂಬಲ ನೀಡಿತ್ತು. ಇದು ಆರೆಸ್ಸೆಸ್'ಗೆ ಪ್ರಜಾಪ್ರಭುತ್ವದಲ್ಲಿರುವ ನಂಬಿಕೆಯನ್ನು ತೋರಿಸುತ್ತದೆ. ಮೋಹನ್ ಭಾಗವತ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಶಿಫಾರಸು ಮಾಡಿದರೆ ಅಲ್ಪಸಂಖ್ಯಾತರು ಭಯಪಡಬೇಕಿಲ್ಲ" ಎಂದು ಜಾಫರ್ ಷರೀಫ್ ತಿಳಿಸಿದ್ದಾರೆ.

ರಾಜಕೀಯ ಜೀವನದ ಆರಂಭದಿಂದಲೂ ಬಲಪಂಥೀಯರನ್ನು ಕಟುವಾಗಿ ಟೀಕಿಸಿಕೊಂಡು ಬಂದಿದ್ದ ಜಾಫರ್ ಷರೀಫ್ ಅವರು ತಮ್ಮ ವಿಚಾರಧಾರೆಯನ್ನು ಬದಲಿಸಿಕೊಂಡಿರುವುದು ಇಲ್ಲಿ ಗಮನಾರ್ಹ.

ರಾಜ್ಯದ ಕಾಂಗ್ರೆಸ್ ನಾಯಕತ್ವ ವಿಚಾರದಲ್ಲಿ ಅಸಮಾಧಾನಗೊಂಡ ಹಿರಿಯ ಕಾಂಗ್ರೆಸ್ಸಿಗರಲ್ಲಿ ಷರೀಫ್ ಕೂಡ ಒಬ್ಬರು. ಸಿಎಂ ಸಿದ್ದರಾಮಯ್ಯ ವಿರುದ್ಧ ಷರೀಫ್ ಸಾಕಷ್ಟು ಬಾರಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ನಿನ್ನೆಯಷ್ಟೇ ಷರೀಫ್ ಅವರು ದೆಹಲಿಯಲ್ಲಿ ಬಿಜೆಪಿಯ ಪ್ರಮುಖ ನಾಯಕರನ್ನು ಭೇಟಿಯಾಗಿರುವುದು ಮುಂದಿನ ಬೆಳವಣಿಗೆಗಳಿಗೆ ಧ್ಯೋತಕವಾಗಿದೆ. ಬಿಜೆಪಿ ಮೂಲಗಳ ಪ್ರಕಾರ, ಷರೀಫ್ ಅವರು ಕೇಸರಿ ಪಾಳಯ ಸೇರಿಕೊಳ್ಳುವ ಇಚ್ಛೆ ಹೊಂದಿದ್ದು, ಶೀಘ್ರದಲ್ಲೇ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios