Asianet Suvarna News Asianet Suvarna News

ರೈತರ ತೋಟದಲ್ಲಿ ರಾರಾಜಿಸುತ್ತಿದೆ ಹಲಸು; ಹೆಚ್ಚಾಗಿದೆ ಬೇಡಿಕೆ

 ಹಲಸು ಬೆಳೆಯಲು ನೀರು ಬೇಕಿಲ್ಲ, ಗೊಬ್ಬರವೂ ಬೇಡ. ಆದರೆ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವಾಗಿ ಹಲಸು ಮೇಳಗಳು ನಡೆಯುತ್ತಿವೆ, ರಾಜ್ಯದ ವಿವಿದೆಡೆ ಹಲಸು ಬೆಳೆಗಾರರ ಸಂಘ, ಹಲಸು ಸ್ನೇಹಿಕೂಟಗಳು ಹುಟ್ಟಿಕೊಂಡಿವೆ. ಹಲಸು ಈಗ ತರಕಾರಿ ರೂಪದಲ್ಲಿ, ಹಣ್ಣಿನ ರೂಪದಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

Jackfruit Demand Increased

ಬೆಂಗಳೂರು (ಫೆ.06): ಹಲಸು ಬೆಳೆಯಲು ನೀರು ಬೇಕಿಲ್ಲ, ಗೊಬ್ಬರವೂ ಬೇಡ. ಆದರೆ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವಾಗಿ ಹಲಸು ಮೇಳಗಳು ನಡೆಯುತ್ತಿವೆ, ರಾಜ್ಯದ ವಿವಿದೆಡೆ ಹಲಸು ಬೆಳೆಗಾರರ ಸಂಘ, ಹಲಸು ಸ್ನೇಹಿಕೂಟಗಳು ಹುಟ್ಟಿಕೊಂಡಿವೆ. ಹಲಸು ಈಗ ತರಕಾರಿ ರೂಪದಲ್ಲಿ, ಹಣ್ಣಿನ ರೂಪದಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

ಅಷ್ಟೇ  ಏಕೆ, ಉತ್ತರ ಭಾರತದ ಕೆಲವು ಹೊಟೇಲ್‌ಗಳಲ್ಲಿ ಮಾಂಸಕ್ಕೆ ಪರ್ಯಾಯವಾಗಿ ಎಳೆ ಹಲಸು (ಟೆಂಡರ್ ಜಾಕ್‌ಫ್ರುಟ್) ಬಳಕೆಯಾಗುತ್ತಿದೆ. ರಾಜ್ಯದ ಕೆಲವು ಪ್ರಗತಿಪರ ಕೃಷಿಕರು ಹಲಸನ್ನೇ ಪ್ರಧಾನ ಬೆಳೆಯಾಗಿ ಬೆಳೆಯಲು ಪ್ರಾರಂಭಿಸಿದ್ದಾರೆ. ಕೆಲವು ರೈತರು ನೀರು ಗೊಬ್ಬರವನ್ನೂ ನೀಡಿ ಉತ್ತಮ ಫಸಲು ಪಡೆಯುತ್ತಿರುವ ಉದಾಹರಣೆಯೂ ಇದೆ. ಮಲೆನಾಡು, ಕರಾವಳಿ, ಬಯಲು ಸೀಮೆ ಹೀಗೆ ಎಲ್ಲ ಬಗೆಯ ವಾತಾವರಣದಲ್ಲೂ ಹಲಸನ್ನು ಬೆಳೆಯಲು ಸಾಧ್ಯ ಎಂಬುದು ಸಾಬೀತಾಗಿದೆ.

ಐಸ್‌ಕ್ರೀಂ ಮತ್ತು ಬೇಕರಿ ಉತ್ಪನ್ನ ತಯಾರಕರು ರೈತರ ಮನೆ ಬಾಗಿಲಿಗೇ ಬಂದು ಇದ್ದಷ್ಟೂ ಹಲಸು ಕೊಂಡು ಹೋಗುತ್ತಿದ್ದಾರೆ. ಹಾಗಾಗಿ ರೈತರ ತೋಟದಲ್ಲಿ ಈಗ ಹಲಸು ರಾರಾಜಿಸಲು ಪ್ರಾರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಳಿಯ ವೆಂಕಟಕೃಷ್ಣ ಶರ್ಮ, ಕಡಂಬಿಲ ಕೃಷ್ಣಪ್ರಸಾದ್, ಶಿರಂಕಲ್ಲು ನಾರಾಯಣ ಭಟ್, ಮಲ್ಯ ಶಂಕರ ನಾರಾಯಣ ಭಟ್, ಗೇಬ್ರೀಯಲ್ ವೇಗಸ್, ಧನಂಜಯ ಭಿಡೆ ಮೊದಲಾದವರು ನೂರಾರು ಹಲಸಿನ ಗಿಡ ನೆಟ್ಟಿದ್ದಾರೆ. ಕೊಳ್ಳೆಗಾಲದ ರೈತರೊಬ್ಬರು  ಸಾವಿರಕ್ಕೂ ಅಧಿಕ ಹಲಸಿನ ಗಿಡಗಳನ್ನು ನೆಟ್ಟಿದ್ದಾರೆ.

ಮುಳಿಯ ವೆಂಕಟಕೃಷ್ಣ ಶರ್ಮರ ಬಳಿ 80 ತಳಿಗಳ ಹಲಸಿದೆ! 

ದ.ಕ ಜಿಲ್ಲೆ ವಿಟ್ಲ ಸಮೀಪದ ಮುಳಿಯ ವೆಂಕಟಕೃಷ್ಣ ಶರ್ಮ ಅವರು ನಾಲ್ಕೈದು ವರ್ಷಗಳ ಮೊದಲೇ ಹಲಸು ವಿವಿಧ ತಳಿಯ ಗಿಡಗಳನ್ನು ನೆಟ್ಟಿದ್ದು, ಈಗ ಫಸಲು ನೀಡಲಾರಂಭಿಸಿದೆ. ಅವರ 3 ಎಕ್ರೆ ಜಾಗದಲ್ಲಿ ಸ್ಥಳೀಯ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ತಳಿಯ 80 ಬಗೆಯ 300 ಹಲಸಿನ ಗಿಡಗಳನ್ನು ನೆಟ್ಟಿದ್ದು, ಹತ್ತಾರು ಗಿಡಗಳಲ್ಲಿ ಈಗಾಗಲೇ ಫಲ ಕೈಸೇರಿದೆ.

ಯಾವುದೆಲ್ಲ ತಳಿಗಳಿವೆ?:

ಕಳ್ಳಾಜೆ ರುದ್ರಾಕ್ಷಿ, ನಗರಚಂದ್ರ, ಸರಸ, ಪೆರ್ಡೂರು ಬಿಳಿ ಬಕ್ಕೆ, ತುಷಾರ, ಅನನ್ಯ, ಕುದ್ದುಪದವು ಮಧುರಾ, ರಾಜರುದ್ರಾಕ್ಷಿ, ಮುದ್ರಾಕ್ಷಿ, ನಿರಂತರ, ಅನಂತ, ನಂದನ, ಶ್ರಾವಣ, ಪ್ರಶಾಂತಿ, ವಾದಾ, ಶ್ರೀವರ, ಚೋಟಾ ಪಸಂದ್, ಬಡಾ ಪಸಂದ್, ಎಡ್ಡಿ ಪಸಂದ್, ಈಶಾನ್ಯ, ಆಲ್‌ಸೀಸನ್ ಮಂಗಳೂರು, ಸಿಂಧೂರ, ಸರ್ವದಾ ಹೀಗೆ ಒಟ್ಟು 80  ಬಗೆಯ ಹಲಸಿನ ಹಸಿರು ಕಂಗೊಳಿಸುತ್ತಿದೆ. ತಳಿಗಳಿಗೆ ಮೂಲ ಮರದ ಊರಿನ ಹೆಸರು ಅಥವಾ ಅದನ್ನು ಬೆಳೆಯುತ್ತಿರುವ ರೈತನ ಹೆಸರು ಅಥವಾ ಹಣ್ಣಿನ ಬಣ್ಣ, ರುಚಿ ನೋಡಿ ಹೆಸರು ಇರಿಸಲಾಗಿದೆ.

ಫಲ ನೀಡಿತು 'ವಾಡಾ’:

ಮಹಾರಾಷ್ಟ್ರ ಮೂಲದ 'ವಾಡಾ’ ತಳಿಯ ಹಲಸನ್ನು ಕಸಿತಜ್ಞ ಉಡುಪಿಯ ಗುರು ರಾಜ ಬಾಳ್ತಿಲ್ಲಾಯ ಅವರು ಕಸಿ ಮಾಡಿ ಕೊಟ್ಟಿದ್ದು, ಶರ್ಮರ ತೋಟದಲ್ಲಿ ಈ ವರ್ಷ ಫಸಲು ಬರಲು ಆರಂಭಿಸಿದೆ. ಇದರ ವಿಶೇಷವೆಂದರೆ ಕೆಂಪು ಸೊಳೆ ಮತ್ತು ಗಮ್'ಲೆಸ್. ಈ ಗಿಡದಲ್ಲಿ ವರ್ಷದ 6 ತಿಂಗಳು ಫಸಲು ಲಭ್ಯ.

ಉತ್ತಮ ಆದಾಯ: ಎಳೆ ಹಲಸು ಜನವರಿ ಪ್ರಾರಂಭದಲ್ಲಿ ಕಿಲೋಗೆ 30 ರಿಂದ 40 ರುಪಾಯಿಗೆ ಮಾರಾಟವಾಗುತ್ತದೆ. ಹೆಚ್ಚು ಹೆಚ್ಚು ಫಸಲು ಮಾರುಕಟ್ಟೆಗೆ ಬಂದಾಗ 25  ರು ಇರುತ್ತದೆ. ಹಲಸಿನ

ಹಣ್ಣು ಸೊಳೆ ತೆಗೆದು ಮಾರಾಟ ಮಾಡಿದರೆ ಕಿಲೋಕ್ಕೆ 100 ರುಪಾಯಿಯಂತೆಯೂ, ಇಡೀ ಹಲಸು ಕಿಲೋಕ್ಕೆ 10  ರುಪಾಯಿಯಂತೆಯೂ, ಪ್ರಸಿದ್ಧ ದೊಡ್ಡಬಳ್ಳಾಪುರದ ತುಬಗೆರೆ ಚಂದ್ರ ಹಲಸು ಕಿಲೋಕ್ಕೆ 20 ರಿಂದ 25  ರುಪಾಯಿಗೆ ಮಾರಾಟವಾಗುತ್ತದೆ.

 

Follow Us:
Download App:
  • android
  • ios