Asianet Suvarna News Asianet Suvarna News

11 ಗುತ್ತಿಗೆದಾರರಿಗೆ ಐಟಿ ದಾಳಿಯ ಶಾಕ್‌!

ಚುನಾವಣಾ ಘೋಷಣೆಗೂ ಮುನ್ನ ಮೂರು ತಿಂಗಳ ಅವಧಿಯಲ್ಲಿ ಪ್ರಮುಖ ಇಲಾಖೆಗಳ ಗುತ್ತಿಗೆದಾರರಿಗೆ ಬಿಡುಗಡೆಯಾದ ಹಣದ ಕುರಿತು ಸರ್ಕಾರದಿಂದ ಮಾಹಿತಿ ಪಡೆದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರಿಗೆ ಶಾಕ್‌ ನೀಡಿದ್ದು, ಮೈಸೂರು ಮತ್ತು ಬೆಂಗಳೂರಿನ 11 ಗುತ್ತಿಗೆದಾರರ ಮೇಲೆ ದಾಳಿ ನಡೆಸಿದ್ದಾರೆ.

IT Shock For HC Mahadevapaa

ಬೆಂಗಳೂರು: ಚುನಾವಣಾ ಘೋಷಣೆಗೂ ಮುನ್ನ ಮೂರು ತಿಂಗಳ ಅವಧಿಯಲ್ಲಿ ಪ್ರಮುಖ ಇಲಾಖೆಗಳ ಗುತ್ತಿಗೆದಾರರಿಗೆ ಬಿಡುಗಡೆಯಾದ ಹಣದ ಕುರಿತು ಸರ್ಕಾರದಿಂದ ಮಾಹಿತಿ ಪಡೆದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರಿಗೆ ಶಾಕ್‌ ನೀಡಿದ್ದು, ಮೈಸೂರು ಮತ್ತು ಬೆಂಗಳೂರಿನ 11 ಗುತ್ತಿಗೆದಾರರ ಮೇಲೆ ದಾಳಿ ನಡೆಸಿದ್ದಾರೆ.

ಮಂಗಳವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಮೈಸೂರಿನಲ್ಲಿ 10 ಗುತ್ತಿಗೆದಾರರು ಮತ್ತು ಬೆಂಗಳೂರಲ್ಲಿ ಒಬ್ಬ ಗುತ್ತಿಗೆದಾರರಿಗೆ ಸೇರಿದ ಸ್ಥಳಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ಕೈಗೊಂಡು ಕೋಟ್ಯಂತರ ರು. ಮೌಲ್ಯದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಹಣದ ಬಗ್ಗೆ ಐಟಿ ಅಧಿಕಾರಿಗಳು ಮಾಹಿತಿ ಕೇಳಿದ್ದರು. ಸರ್ಕಾರ ನೀಡಿದ ಈ ಮಾಹಿತಿ ಮೇರೆಗೆ ದಾಳಿ ಪ್ರಕ್ರಿಯೆ ನಡೆದಿದೆ ಎಂದು ಮೂಲಗಳು ಹೇಳಿವೆ.

ತೆರಿಗೆ ವಂಚನೆ ಆರೋಪದ ಮೇಲೆ ಗುತ್ತಿಗೆದಾರರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಮಂಗಳವಾರ ತಡರಾತ್ರಿವರೆಗೆ ಪರಿಶೀಲನೆ ಕಾರ್ಯ ನಡೆದಿದೆ. ಇಂದೂ ಸಹ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ಗುತ್ತಿಗೆದಾರರ ಮೇಲೆ ನಡೆದ ದಾಳಿಯಲ್ಲಿ ಒಟ್ಟು 60 ಐಟಿ ಅಧಿಕಾರಿಗಳ ತಂಡ ಪಾಲ್ಗೊಂಡಿದೆ. ಗುತ್ತಿಗೆದಾರರ ವ್ಯವಹಾರ ಮತ್ತು ಅಘೋಷಿತ ಆದಾಯದ ಬಗ್ಗೆ ಮಾಹಿತಿ ಕ್ರೋಢೀಕರಿಸಲಾಗಿದೆ ಎಂದು ತಿಳಿದುಬಂದಿದೆ.

ದಾಳಿಗೊಳಗಾಗಿರುವ ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಟೆಂಡರ್‌ಗಳನ್ನು ಪಡೆದುಕೊಳ್ಳುತ್ತಿದ್ದರು ಮತ್ತು ಸಚಿವರೊಬ್ಬರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು ಎನ್ನಲಾಗುತ್ತಿದ್ದರೂ ಇದನ್ನು ಖಚಿತಪಡಿಸಲು ಐಟಿ ಇಲಾಖೆ ಉನ್ನತ ಅಧಿಕಾರಿಗಳು ನಿರಾಕರಿಸಿದ್ದಾರೆ. ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಬಳಿಕವಷ್ಟೇ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ.

ಸರ್ಕಾರದಿಂದ ಗುತ್ತಿಗೆ ಪಡೆದ 11 ಗುತ್ತಿಗೆದಾರರು ಬ್ಯಾಂಕ್‌ ಮೂಲಕ ಭಾರೀ ಪ್ರಮಾಣದಲ್ಲಿ ಹಣ ವರ್ಗಾವಣೆ ಮಾಡಿರುವ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಮೇಲ್ನೋಟಕ್ಕೆ ಅಕ್ರಮವಾಗಿ ವರ್ಗಾವಣೆ ಮಾಡಿ ತೆರಿಗೆ ವಂಚನೆ ಮಾಡಲಾಗಿದೆ ಎಂದು ಕಂಡುಬಂದಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ದಾಳಿಗೊಳಗಾಗಿರುವ ಗುತ್ತಿಗೆದಾರರು ಬೃಹತ್‌ ಪ್ರಮಾಣದಲ್ಲಿ ಹಣ ವರ್ಗಾವಣೆ ಮಾಡಿರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಐಟಿ ಅಧಿಕಾರಿಗಳು ನಡೆಸಿರುವ ದಾಳಿ ಪ್ರಕ್ರಿಯೆಗೂ, ಚುನಾವಣೆಗೂ ಸಂಬಂಧ ಇಲ್ಲ. ಚುನಾವಣೆಗೆ ಸಂಬಂಧಿಸಿದಂತೆ ದಾಳಿ ನಡೆಸಬೇಕಾದರೆ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಆದರೆ, ಚುನಾವಣಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ತೆರಿಗೆ ವಂಚನೆಗೆ ಸಂಬಂಧಿಸಿದ ದಾಳಿಯಾಗಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಹಲವು ಎಟಿಎಂಗಳಲ್ಲಿ ನಗದಿನ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ಕಾರ್ಯಾಚರಣೆ ಕೈಗೊಂಡಾಗ 4.13 ಕೋಟಿ ರು. ಅಕ್ರಮ ಹಣ ಪತ್ತೆಯಾಗಿತ್ತು. ಅಲ್ಲದೇ, ಗುತ್ತಿಗೆದಾರರೊಬ್ಬರ ಬಳಿ 55 ಲಕ್ಷ ರು. ವಶಪಡಿಸಿಕೊಳ್ಳಲಾಗಿತ್ತು. ಆತನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಗುತ್ತಿಗೆದಾರರ ವಹಿವಾಟಿನ ಬಗ್ಗೆ ಮಾಹಿತಿ ದೊರೆತಿದ್ದು, ಆತ ನೀಡಿದ ಮಾಹಿತಿಯ ಆಧಾರದ ಮೇಲೆಯೂ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios