ಬೆಂಗಳೂರು :  ಸ್ಯಾಂಡಲ್‌ವುಡ್ ನಟ ಹಾಗೂ ನಿರ್ಮಾಪಕರ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಸತತ 50 ಗಂಟೆಗಳ ಕಾಲ ನಡೆಸಿದ ದಾಳಿಯಲ್ಲಿ ದಾಖಲೆಗಳಿಲ್ಲದ ಕೋಟಿ ಕೋಟಿ ರು. ಮೌಲ್ಯದ ಆಸ್ತಿ ಮತ್ತು ನಗದು ಪತ್ತೆ ಮಾಡಲಾಗಿದೆ. ಪತ್ತೆಯಾದ ಅಕ್ರಮ ಸಂಪತ್ತು ಸಿನಿ ರಂಗವನ್ನು ಹಾಗೂ ಅವರ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ.

ಆದಾಯ ತೆರಿಗೆ ಇಲಾಖೆ 2019 ರ ಜ. 3ರಂದು ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ಯಶ್ ಹಾಗೂ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಜಯಣ್ಣ, ವಿಜಯ್ ಕಿರಗಂದೂರು ಮತ್ತು ಸಿ.ಆರ್.ಮನೋಹರ್ ಮನೆ ಸಂಬಂಧಿಕರ ಹಾಗೂ ಕಚೇರಿಗಳಿಂದ ದಾಳಿ ನಡೆಸಿ, ನಿರಂತರ ನಾಲ್ಕು ದಿನ ಶೋಧ ನಡೆಸಿತ್ತು.

‘ಈ ವೇಳೆ ಅಘೋಷಿತವಾಗಿದ್ದ 11 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಇನ್ನು ಬರೋಬ್ಬರಿ 109 ಕೋಟಿ ರು. ಲೆಕ್ಕಪತ್ರಗಳಿಲ್ಲದ ಆದಾಯವನ್ನು ಪತ್ತೆ ಹಚ್ಚಲಾಗಿದೆ. ಜಪ್ತಿ ಮಾಡಿದ 11 ಕೋಟಿ  ರು. ಮೌಲ್ಯದ ಆಸ್ತಿಯಲ್ಲಿ 2.85 ಕೋಟಿ  ರು. ನಗದು ಮತ್ತು 25.3 ಕೆ.ಜಿ. ಚಿನ್ನಾಭರಣ ಸೇರಿದೆ’ ಎಂದು ಭಾನುವಾರ ಆದಾಯ ತೆರಿಗೆ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಇದರೊಂದಿಗೆ ಕನ್ನಡ ಚಿತ್ರರಂಗದ ಮೇಲೆ ನಡೆಸಿದ ಅತಿದೊಡ್ಡ ಐಟಿ ದಾಳಿಯ ರೋಚಕ ಒಳಗುಟ್ಟು ಕೊಂಚ ಬಯಲಾಗಿದೆ.

ಮುಂದಿನ ದಿನಗಳಲ್ಲಿ ದಾಳಿಗೊಳಗಾದ ವರ ಮೇಲೆ ಐಟಿ ಇಲಾಖೆ ಪ್ರಕರಣ ದಾಖಲಿಸುವ ಸಾಧ್ಯತೆಯೂ ಇದೆ. ಈ ಮಧ್ಯೆ ಜಪ್ತಿ ಮಾಡಿರುವ 11 ಕೋಟಿ ರು. ಮೌಲ್ಯದ ಆಸ್ತಿ ಮತ್ತು ಪತ್ತೆ ಹಚ್ಚಲಾಗಿರುವ ದಾಖಲೆಗಳಲ್ಲಿದ್ದ 109 ಕೋಟಿ ರು. ಆದಾಯದಲ್ಲಿ ಯಾರ‌್ಯಾ ರದ್ದು ಎಷ್ಟೆಷ್ಟು ಪಾಲು ಎಂಬುದರ ಕುರಿತು ಐಟಿ ಇಲಾಖೆ ಮಾಹಿತಿ ನೀಡಿಲ್ಲ.

ಐಟಿ ಇಲಾಖೆ ಹೇಳಿದ್ದೇನು?: ನಟ ಹಾಗೂ ನಿರ್ಮಾಪಕರ ಮೇಲಿನ ದಾಳಿಯಲ್ಲಿ 2.85 ಕೋಟಿ ರು. ನಗದು, 25.3 ಕೆ.ಜಿ. ಚಿನ್ನಾಭರಣ ಸೇರಿ ಲೆಕ್ಕ ನೀಡದ 11 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಇನ್ನೂ ೧೦೯ ಕೋಟಿ ರು. ಆದಾಯಕ್ಕೆ ದಾಖಲೆಗಳಿಲ್ಲವಾಗಿದೆ. ಹಲವು ಆಸ್ತಿ ಹಾಗೂ ಚಿನ್ನಾಭರಣಗಳ ಮೇಲೆ ಕಲಾವಿದರು ಹೂಡಿಕೆ ಮಾಡಿದ್ದಾರೆ. ಆ ಹಣದ ಮೂಲ ಕುರಿತು ಸೂಕ್ತ ದಾಖಲೆಗಳಿಲ್ಲರುವುದರ ಬಗ್ಗೆ ಅಗತ್ಯ ಸಾಕ್ಷ್ಯಗಳು ದೊರೆತಿವೆ. 

ಚಿತ್ರ ವಿತರಕರಿಂದ ಸ್ವೀಕರಿಸಿದ ನಗದಿಗೆ ಹಾಗೂ ಖರ್ಚುಗಳಿಗೂ ದಾಖಲೆಗಳಿಲ್ಲವಾಗಿದ್ದು, ಆ ಹಣದ ಮೂಲ ಬಹಿರಂಗಪಡಿಸಿಲ್ಲ. ಅಲ್ಲದೆ, ಆಡಿಯೋ, ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳ ಮಾರಾಟದಿಂದ ಗಳಿಸಿದ ಆದಾಯವು ಸಂಶಯಾಸ್ಪದವಾಗಿದೆ. ಚಿತ್ರಮಂದಿರಗಳಿಂದ  ಸಂಗ್ರಹಿಸಿದ ನಗದನ್ನು ಇತರೆ ಆದಾಯ ಮೂಲಗಳಾಗಿ ತೋರಿಸಲು ಪ್ರಯತ್ನ ನಡೆದಿರುವ ಬಗ್ಗೆ ದಾಖಲೆಗಳು ಲಭ್ಯವಾಗಿದೆ. ಅಲ್ಲದೆ, ಇನ್ನೂ ಮರೆಮಾಚಲಾಗಿರುವ ಆದಾಯವು ಬೃಹತ್ ಪ್ರಮಾಣದಲ್ಲಿ ಇರುವ ಸಾಧ್ಯತೆಯಿದೆ ಎಂದು ಪ್ರಕಟಣೆ ತಿಳಿಸಿದೆ.

ಹಲವು ಆಸ್ತಿ ಹಾಗೂ ಚಿನ್ನಾಭ
ರಣಗಳ ಮೇಲೆ ಕಲಾವಿದರು
ಹೂಡಿಕೆ ಮಾಡಿದ್ದಾರೆ.

 ಹಣದ ಮೂಲ ಕುರಿತು
ಸೂಕ್ತ ದಾಖಲೆಗಳಿಲ್ಲ

ಚಿತ್ರ ವಿತರಕರಿಂದ ಸ್ವೀಕರಿಸಿದ
ನಗದಿಗೆ ಹಾಗೂ ಖರ್ಚು
ಗಳಿಗೂ ದಾಖಲೆಗಳಿಲ್ಲ

ಆಡಿಯೋ, ಡಿಜಿಟಲ್ ಮತ್ತು
ಸ್ಯಾಟಲೈಟ್ ಹಕ್ಕುಗಳ
ಮಾರಾಟದಿಂದ ಗಳಿಸಿದ
ಆದಾಯದ ಬಗ್ಗೆ ಶಂಕೆ

ಚಿತ್ರಮಂದಿರಗಳಿಂದ
ಸಂಗ್ರಹಿಸಿದ ಹಣ ಬಗ್ಗೆಯೂ
ಲೆಕ್ಕ ಸರಿ ಇಲ್ಲ.