ನವದೆಹಲಿ[ಜೂ.22]: ಜಮ್ಮು ಕಾಶ್ಮೀರದ ಅನಂತ್ ನಾಗ್ ನಲ್ಲಿ IEEDಸ್ಫೋಟದಲ್ಲಿ ಹುತಾತ್ಮ ಯೋಧ ಅಜಿತ್ ಕುಮಾರ್ ಸಾಹೂರವರ ಪಾರ್ಥೀವ ಶರೀರದ ಮೇಲೆ ಪಕ್ಷದ ಧ್ವಜ ಹೊದಿಸಿದ ಬಳಿಕ ಅಧಿಕಾರದಲ್ಲಿರುವ BJD ಪಕ್ಷ ಭಾರೀ ಟೀಕೆಗೆ ಗುರಿಯಾಗಿದೆ. ಬಿಜೆಪಿ ಇದನ್ನು ಹುತಾತ್ಮನಿಗೆ ಮಾಡಿರುವ ಅವಮಾನ ಎಂದು ಆರೋಪಿಸಿದೆ. ಇವೆಲ್ಲದರ ನಡುವೆ ಈ ಕುರಿತಾಗಿ BJD ಪಕ್ಷ ಖೇದ ವ್ಯಕ್ತಪಡಿಸಿದೆ ಹಾಗೂ ಹುತಾತ್ಮನ ಪಾರ್ಥೀವ ಶರೀರಕ್ಕೆ ಪಕ್ಷದ ಧ್ವಜ ಹೊದಿಸಿದ ಕಾರ್ಯಕರ್ತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಈ ಕುರಿತಾಗಿ ಸ್ಪಷ್ಟನೆ ನೀಡಿರುವ BJD 'ಪಕ್ಷ ಹುತಾತ್ಮರನ್ನು ಗೌರವಿಸುತ್ತದೆ. ಏನು ನಡೆದಿದೆ ಎಂಬ ವಿಚಾರ ನಮ್ಮ ಗಮನಕ್ಕೆ ಬಂದಿದೆ ಹಾಗೂ ನಾವಿದನ್ನು ಖಂಡಿಸುತ್ತೇವೆ. ಇಂತಹ ವರ್ತನೆ ತೋರಿದ ಕಾರ್ಯಕರ್ತನ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುತ್ತೇವೆ' ಎಂದಿದ್ದಾರೆ.

BJD ಕ್ಷಮೆ ಯಾಚಿಸಲಿ ಎಂದ BJP

BJP ನಾಯಕ ಬೈಜಯಂತ್ ಜಯ್ ಪಾಂಡಾ ಪ್ರಕರಣದ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ಬಿಜೆಡಿ ಹುತಾತ್ಮರ ವಿಚಾರವಾಗಿ ರಾಜಕೀಯ ನಡೆಸುತ್ತಿದೆ. ಸೈನಿಕನ ಪಾರ್ಥೀವ ಶರೀರವನ್ನು ಭಾರತೀಯ ತ್ರಿವರ್ಣ ಧ್ವಜದ ಬದಲಾಗಿ ಪಕ್ಷದ ಧ್ವಜದಿಂದ ಸುತ್ತಿರುವುದು ನಿಜಕ್ಕೂ ಅವಮಾನಕಾರಿ ಕೃತ್ಯ' ಎಂದಿದ್ದಾರೆ.