ಬೆಂಗಳೂರು :  ಸ್ಯಾಂಡಲ್‌ವುಡ್‌ನಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳ ಆಟವು ಎರಡನೇ ದಿನವೂ ಮುಂದುವರಿದಿದ್ದು, ಸ್ಟಾರ್‌ ನಟ ಹಾಗೂ ನಿರ್ಮಾಪಕರಿಗೆ ವಿಚಾರಣೆಯ ಬಿಸಿ ಮುಟ್ಟಿಸಿದ್ದಾರೆ.

ಗುರುವಾರ 25ಕ್ಕೂ ಹೆಚ್ಚು ಸ್ಥಳಗಳ ಮೇಲೆ ಕಾರ್ಯಾಚರಣೆ ನಡೆದರೆ, ಶುಕ್ರವಾರ 30ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಅವುಗಳೆಲ್ಲವು ನಟ, ನಿರ್ಮಾಪಕರಿಗೆ ಸೇರಿದ ಸ್ಥಳಗಳಿವೆ ಎಂದು ಐಟಿ ಮೂಲಗಳು ತಿಳಿಸಿವೆ.

ನಟರಾದ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌, ಯಶ್‌, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ವಿಜಯ್‌ ಕಿರಂಗದೂರು, ಸಿ.ಆರ್‌.ಮನೋಹರ್‌ ಹಾಗೂ ಜಯಣ್ಣ ಅವರಿಗೆ ಸೇರಿದ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಮೊದಲ ದಿನವಾದ ಗುರುವಾರದ ಕಾರ್ಯಾಚರಣೆ ವೇಳೆ ಪತ್ತೆಯಾದ ದಾಖಲೆಗಳ ಸುಳಿವಿನ ಮೇರೆಗೆ ಎರಡನೇ ದಿನವಾದ ಶುಕ್ರವಾರ ಮತ್ತಷ್ಟುಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದೆ. ತಡರಾತ್ರಿಯವರೆಗೆ ಶೋಧ ಕಾರ್ಯ ನಡೆದ ಸಂದರ್ಭದಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗಳ ದಾಖಲೆಗಳು ಪತ್ತೆಯಾಗಿದೆ. ಬಗೆದಷ್ಟು ಸಂಪತ್ತು ಸಿಗುವಂತೆ ದಾಖಲೆಗಳ ಪರಿಶೀಲನೆ ಮಾಡಿದಷ್ಟುಆಸ್ತಿಗಳ ವಿವರ ಲಭ್ಯವಾಗುತ್ತಿದೆ.

ಹೀಗಾಗಿ ಕೆಲವೆಡೆ ಶನಿವಾರವು ಸಹ ಐಟಿ ಅಧಿಕಾರಿಗಳ ಪರಿಶೋಧನೆ ಕಾರ್ಯ ಮುಂದುವರಿಯಲಿದೆ. ಸಿನಿಮಾ, ವ್ಯವಹಾರ ಸೇರಿದಂತೆ ಯಾವ ಮೂಲಗಳಿಂದ ಆದಾಯ ಗಳಿಕೆ ಮಾಡಲಾಗಿದೆ ಮತ್ತು ಅದಕ್ಕೆ ತೆರಿಗೆ ಪಾವತಿಸಲಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಶೋಧ ಕಾರ್ಯ ನಡೆಸುವಲ್ಲಿ ನಿರತರಾಗಿದ್ದಾರೆ. ದಾಳಿ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಅವುಗಳನ್ನು ಪರಿಶೀಲನೆ ತೆರಿಗೆ ಪಾವತಿಯ ಕುರಿತು ನಿಖರವಾದ ಅಂಶಗಳು ಗೊತ್ತಾಗಲಿವೆ ಎಂದು ಐಟಿ ಮೂಲಗಳು ತಿಳಿಸಿವೆ.

ವಿಚಾರಣೆ:  ದಾಳಿಗೊಳಗಾದ ನಟ, ನಿರ್ಮಾಪಕರ ಕುಟುಂಬದ ಸದಸ್ಯರು ಮತ್ತು ಮನೆಕೆಲಸದವರು ಸೇರಿದಂತೆ ಅವರಿಗೆ ಸಂಬಂಧಪಟ್ಟವ್ಯಕ್ತಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ನಿರಂತರವಾಗಿ ಪ್ರಶ್ನಿಸಿ ಹಲವು ಮಾಹಿತಿಗಳನ್ನು ಕ್ರೋಢೀಕರಿಸಿದ್ದಾರೆ. ಪ್ರತಿಯೊಬ್ಬರ ಹೇಳಿಕೆಗಳನ್ನು ಸಹ ಐಟಿ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ. ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದ್ದು, ಅಗತ್ಯ ಬಿದ್ದರೆ ಮತ್ತೊಮ್ಮೆ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗುವುದು. ಅಲ್ಲದೇ, ಎಲ್ಲರ ಹೇಳಿಕೆಗಳನ್ನು ತಾಳೆ ಹಾಕಿ ನೋಡಲಾಗುತ್ತಿದೆ. ವ್ಯತ್ಯಾಸ ಕಂಡುಬಂದರೆ ಸಹಜವಾಗಿಯೇ ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾತ್ರಿಯಿಡೀ ದಾಳಿ ಸ್ಥಳಗಳಲ್ಲೇ ಮೊಕ್ಕಾಂ!:  ಗುರುವಾರ ತಡರಾತ್ರಿವರೆಗೆ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ದಾಳಿ ನಡೆದ ಸ್ಥಳಗಳಲ್ಲಿಯೇ ರಾತ್ರಿ ತಂಗಿದ್ದು, ಬೆಳಗ್ಗೆ ಮತ್ತೆ ಪರಿಶೀಲನೆ ಕಾರ್ಯವನ್ನು ಆರಂಭಿಸಿದರು. ಅಲ್ಲಿಯೇ ತಿಂಡಿ, ಊಟ ತರಿಸಿಕೊಂಡು ಸೇವಿಸಿ ತಮ್ಮ ಕೆಲಸ ಮುಂದುವರೆಸಿದರು.

ದಾಳಿಗೊಳಗಾಗಿರುವ ನಟ, ನಿರ್ಮಾಪಕರು ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದು, ಎಲ್ಲೆಲ್ಲಿ ಹಣ ಹೂಡಿಕೆ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎನ್ನಲಾಗಿದೆ.