ಭಾನುವಾರ ಕಾಂಗ್ರೆಸ್ ಮುಖಂಡರಿಗೆ ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ನಾಗರ ಬಾವಿಯಲ್ಲಿರುವ ರಾಜರಾಜೇಶ್ವರಿ ನಗರದ ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಗೌಡ ನಿವಾಸದ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಸುಮಾರು ಮೂರು ತಾಸಿಗೂ ಅಧಿಕ ಹೊತ್ತು ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ.
ಬೆಂಗಳೂರು : ಭಾನುವಾರ ಕಾಂಗ್ರೆಸ್ ಮುಖಂಡರಿಗೆ ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ನಾಗರ ಬಾವಿಯಲ್ಲಿರುವ ರಾಜರಾಜೇಶ್ವರಿ ನಗರದ ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಗೌಡ ನಿವಾಸದ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಸುಮಾರು ಮೂರು ತಾಸಿಗೂ ಅಧಿಕ ಹೊತ್ತು ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕೆಲವು ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಆದರೆ ಹಣ ವಶವಾಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಐಟಿ ಅಧಿಕಾರಿಗಳ ತಪಾಸಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವಿಗೌಡ, ನನ್ನ ಮನೆಯಲ್ಲಿ ಐಟಿ ಅಧಿಕಾರಿಗಳು ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳು ಹಣ ಜಪ್ತಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ನಾವು ಯಾವುದೇ ರೀತಿ ಚುನಾವಣಾ ಅಕ್ರಮದಲ್ಲಿ ತೊಡಗಿಲ್ಲ.
ವಿರೋಧಿಗಳ ಸುಳ್ಳು ವಂದತಿಗೆ ಐಟಿ ದಾಳಿ ನಡೆದಿದೆ ಎಂದು ಕಿಡಿಕಾರಿದ್ದಾರೆ. 1 ಲಕ್ಷ ನಗದು ಜಪ್ತಿ: ಮತ್ತೊಂದೆಡೆ ಯಶವಂತಪುರದ ಮುತ್ಯಾಲ ನಗರದಲ್ಲಿ ಚುನಾವಣಾಧಿಕಾರಿಗಳು 1 ಲಕ್ಷ ನಗದು ಜಪ್ತಿ ಮಾಡಿದ್ದಾರೆ. ಈ ಹಣವನ್ನು ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ.
ಕಾರು ಹಾಗೂ ನಗದು ಜಪ್ತಿ ಮಾಡಿದ್ದೇವೆ. ಪ್ರಕರಣದ ಆರೋಪಿ ಪ್ರಶಾಂತ್ ರೆಡ್ಡಿ ಎಚ್ ಎಎಲ್ ಬಳಿಯ ವಿನಾಯಕ ನಗರದ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮುತ್ಯಾಲ ನಗರದಲ್ಲಿ ಸುತ್ತಾಡುತ್ತಿದ್ದ ಕಾರು (ಕೆಎ 51, ಎಂಸಿ 2181) ತಪಾಸಣೆ ನಡೆಸಿದ ಸಂಚಾರ ದಳದ ಅಧಿಕಾರಿಗಳು, ಅದರಲ್ಲಿ ಹಣವಿರುವುದನ್ನು ಪತ್ತೆ ಹಚ್ಚಿದ್ದರು. ಈ ಸಂಬಂಧ ಕಾರಿನ ಚಾಲಕ ಪ್ರಶಾಂತ್ ರೆಡ್ಡಿ ಎಂಬಾತ ನನ್ನು ವಶಕ್ಕೆ ಪಡೆದ ಪೊಲೀಸರು, ನಂತರ ಠಾಣಾ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಿದ್ದಾರೆ.
ಫ್ಲೈಯಿಂಗ್ ಸ್ಕ್ವಾಡ್ ತಂಡವು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ್ದೇವೆ. ಬಿಜೆಪಿ ಅಭ್ಯರ್ಥಿ ಪರವಾಗಿ ಮತದಾರರಿಗೆ ಹಂಚಲಾಗುತ್ತಿತ್ತು ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದರು. ಅದನ್ನು ಆಧರಿಸಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದರೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ಕೆಲ ವ್ಯಾಪಾರಿಗಳು, ಜಪ್ತಿಯಾದ ಹಣವು ಮಾರುಕಟ್ಟೆಗೆ ಸಂಬಂಧಿಸಿದ್ದಾಗಿ ಎಂದು ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
