ಗುಜರಾತ್ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿರುವ ಈಗಲ್‌ಟನ್ ರೆಸಾರ್ಟ್ ಮೇಲಿನ ದಾಳಿಗೆ ಎರಡು ದಿನಗಳ ಮೊದಲೇ ಕೇಂದ್ರ ಆದಾಯ ತೆರಿಗೆ ಇಲಾಖೆ ಇಬ್ಬರು ಅಧಿಕಾರಿಗಳು ರೆಸಾರ್ಟ್‌ನಲ್ಲೇ ತಂಗಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ರಾಮನಗರ (ಆ.04): ಗುಜರಾತ್ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿರುವ ಈಗಲ್‌ಟನ್ ರೆಸಾರ್ಟ್ ಮೇಲಿನ ದಾಳಿಗೆ ಎರಡು ದಿನಗಳ ಮೊದಲೇ ಕೇಂದ್ರ ಆದಾಯ ತೆರಿಗೆ ಇಲಾಖೆ ಇಬ್ಬರು ಅಧಿಕಾರಿಗಳು ರೆಸಾರ್ಟ್‌ನಲ್ಲೇ ತಂಗಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಗುಜರಾತ್ ಶಾಸಕರು ಈಗಲ್‌ಟನ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಕಂಪನಿಯೊಂದರ ಹೆಸರಿನಲ್ಲಿ ರೆಸಾರ್ಟ್‌ನಲ್ಲಿ ಎರಡು ರೂಮ್‌ಗಳನ್ನು ಬುಕ್‌ಮಾಡಿದ್ದರು. ಅದರಲ್ಲಿ ಇಲಾಖೆಯ ಇಬ್ಬರು ಅಧಿಕಾರಿಗಳು ಪ್ರತ್ಯೇಕವಾಗಿ ಉಳಿದುಕೊಂಡು ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ಗುಜರಾತ್ ಕಾಂಗ್ರೆಸ್ ಶಾಸಕರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಮೇಲಧಿಕಾರಿಗಳಿಗೆ ಈ ಕುರಿತ ಮಾಹಿತಿಗಳನ್ನು ರವಾನಿಸುತ್ತಿದ್ದರು. ಬುಧವಾರ ಎಂಟು ಮಂದಿ ಐಟಿ ಅಧಿಕಾರಿಗಳು ಗಾಲ್ಫ್ ಆಡುವ ನೆಪದಲ್ಲಿ ರೆಸಾರ್ಟ್‌ನೊಳಗೆ ಪ್ರವೇಶಿಸುತ್ತಿದ್ದಂತೆ ಇವರು ಕೊಟ್ಟ ಮಾಹಿತಿಯಂತೆ ಎಲ್ಲರೂ ನೇರವಾಗಿ ಡಿಕೆಶಿ ಮತ್ತು ಉಳಿದವರು ನೆಲೆಸಿದ್ದ ಕೊಠಡಿ ಪ್ರವೇಶಿಸಿದ್ದರು. ಈ ಅನಿರೀಕ್ಷಿತ ದಾಳಿಯಿಂದ ಎಲ್ಲರೂ ಅವಕ್ಕಾಗಿದ್ದರು.