ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಹೋರಾಟವನ್ನು ಘೋಷಿಸಿವೆ. ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿರುವ ವಿರೋಧ ಪಕ್ಷಗಳು, ಈ 'ಲೂಟಿ ಸರ್ಕಾರದ' ವಿರುದ್ಧ ರಾಜ್ಯಾದ್ಯಂತ ಹೋರಾಟ ಮುಂದುವರೆಸುವುದಾಗಿ ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧ (ಫೆ.5): ಅಬಕಾರಿ ಇಲಾಖೆ ಭ್ರಷ್ಟಾಚಾರ ತನಿಖೆ ವಹಿಸುವುದು ಮತ್ತು ಅಬಕಾರಿ ಸಚಿವ ರಾಜೀನಾಮೆಗೆ ಅಗ್ರಹಿಸಿ ರಾಜ್ಯಾದ್ಯಂತ ಬಿಜೆಪಿ-ಜೆಡಿಎಸ್‌ ಜಂಟಿಯಾಗಿ ಹೋರಾಟ ಮುಂದುವರೆಸಲಿದ್ದೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್‌ ಒಟ್ಟಾಗಿ ಅಧಿವೇಶದನ ಆರಂಭದಿಂದಲೂ ಈ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೇವೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಮೇಲುಗೈ ಸಾಧಿಸಿವೆ. ಆರು ಸಾವಿರ ಕೋಟಿ ರು. ಲೂಟಿಯ ಅಬಕಾರಿ ಹಗರಣ ಬಯಲಿಗೆ ತಂದಿದ್ದೇವೆ. ತನಿಖೆ ಹಾಗೂ ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದೇವೆ. ಅಹೋರಾತ್ರಿ ಧರಣಿ ಸಹ ಮಾಡಿದ್ದೇವೆ. ಈ ಹೋರಾಟವನ್ನು ಇಲ್ಲಿಗೆ ಬಿಡುವುದಿಲ್ಲ. ರಾಜ್ಯಾದ್ಯಂತ ಈ ಲೂಟಿ ಸರ್ಕಾರದ ವಿರುದ್ಧ ಹೋರಾಟ ಮಾಡಲಿದ್ದೇವೆ. ಈ ಕಳ್ಳ ಕಾಂಗ್ರೆಸ್‌ ಸರ್ಕಾರವನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ಮುಂದುವರೆಸಲಿದ್ದೇವೆ ಎಂದು ತಿಳಿಸಿದರು.

ನಿರ್ಣಯ ಕಸದ ಬುಟ್ಟಿಗೆ:

ವಿಬಿಜಿ ರಾಮ್‌ ಜಿ ಕಾಯ್ದೆ ವಿರುದ್ಧ ರಾಜ್ಯ ಸರ್ಕಾರ ತಂದಿರುವ ನಿರ್ಣಯವೇ ಅಕ್ರಮ. ಸದನದ ನಿಯಮದ ಪ್ರಕಾರ 5 ತಾಸಿಗಿಂತ ಹೆಚ್ಚು ಚರ್ಚೆಗೆ ಅವಕಾಶವಿಲ್ಲ. ಆರೇಳು ಗಂಟೆ ಮೀರಿ ಚರ್ಚೆಗೆ ಅವಕಾಶ ನೀಡಲಾಗಿದೆ. ಈ ನಿರ್ಣಯ ಮಂಡನೆ ಮುನ್ನ ಸರ್ಕಾರ ಏಳು ದಿನ ಮುಂಚಿತವಾಗಿ ನೋಟಿಸ್‌ ಕೊಡಬೇಕಿತ್ತು. ಎಲ್ಲ ನಿಯಮ ಉಲ್ಲಂಘಿಸಿ ನಿರ್ಣಯ ತಂದಿದೆ. ಹೀಗಾಗಿ ನಿರ್ಣಯಕ್ಕೆ ನಯಾ ಪೈಸೆ ಬೆಲೆಯಿಲ್ಲ. ಇದು ಕಸದ ಬುಟ್ಟಿಗೆ ಸೇರುವ ನಿರ್ಣಯ ಎಂದರು.

ಈ ಕಾಂಗ್ರೆಸ್‌ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಆರು ಸಾವಿರ ಕೋಟಿ ರು. ಲೂಟಿ ಮಾಡಿ ಪಂಚ ರಾಜ್ಯಗಳ ಚುನಾವಣೆಗೆ ಕಳುಹಿಸುತ್ತಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳ ನೇರ ಪಾತ್ರವಿದೆ. ಈ ಕಾರಣಕ್ಕೆ ಅವರು ಅಬಕಾರಿ ಸಚಿವರ ರಾಜೀನಾಮೆ ಪಡೆಯುತ್ತಿಲ್ಲ ಎಂದು ಆರ್‌.ಅಶೋಕ್‌ ಕಿಡಿಕಾರಿದರು.

ಇದನ್ನು ವಿರೋಧಿಸಿ ನಾವು ಸಭಾತ್ಯಾಗ ಮಾಡಿದ್ದೇವೆ. ಜನಪರ, ಪಾರಾದರ್ಶಕ ವಿಬಿ ಜಿ ರಾಮ್‌ ಜಿ ಕಾಯ್ದೆಯನ್ನು ನಾವು ಸ್ವಾಗತಿಸುವುದಾಗಿ ಹೇಳಿದರು.

ಸ್ಪಿಕರ್‌ ನಡೆಗೆ ವಿರೋಧ:

ವಿಧಾನಸಭೆ ಸ್ಪೀಕರ್‌ ಅವರ ನಡೆ ಸರಿ ಇರಲಿಲ್ಲ. ಆಡಳಿತ ಪಕ್ಷದ ಶಾಸಕ ಶಿವಲಿಂಗೇಗೌಡ ಕೆಟ್ಟ ಪದ ಬಳಕೆ ಮಾಡಿದರೂ ಸ್ಪೀಕರ್‌ ನಗುತ್ತಾ ಕುಳಿತಿದ್ದರು. ಇದು ಸರಿನಾ? ಪ್ರಜಾಪ್ರಭುತ್ವಕ್ಕೆ ಮಾರಕ. ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಪೀಠ ಮುಖ್ಯ. ಸ್ಪೀಕರ್‌ ಅವರು ಆ ಪೀಠದ ಘಟನೆ ಹಾಳು ಮಾಡಿದ್ದಾರೆ. ವಿರೋಧ ಪಕ್ಷಗಳನ್ನು ದಮನ ಮಾಡಲು ಸ್ಪೀಕರ್‌ ಆಡಳಿತ ಪಕ್ಷದ ಪರ ವಾಲಿದ್ದು ನೋವಿನ ಸಂಗತಿ. ಇದನ್ನು ಸಹಿಸುವುದಿಲ್ಲ ಎಂದು ಸ್ಪೀಕರ್‌ಗೂ ಹೇಳಿದ್ದೇವೆ ಎಂದರು.

-ಕೋಟ್‌-ಸದನ ಶಿಷ್ಟಾಚಾರ ಉಲ್ಲಂಘನೆ

ಸದನ ಆರಂಭದಿಂದಲೇ ಈ ಸರ್ಕಾರ ಎಡವಿದೆ. ರಾಜ್ಯಪಾಲರ ಬಗ್ಗೆ ಅವಹೇಳನ ಮಾಡಿ, ನಿಂದಿಸಿದೆ. ಸದನದ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಸಭಾಧ್ಯಕ್ಷರ ಪೀಠ ದುರ್ಬಳಕೆಯಾಗಿದೆ. ಅಬಕಾರಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಪುರಾವೆ ಕೊಟ್ಟರೂ ಲಘುವಾಗಿ ತೆಗೆದುಕೊಂಡಿದೆ. ಇದನ್ನು ಇಲ್ಲಿಗೆ ಬಿಡುವುದಿಲ್ಲ. ಜೆಡಿಎಸ್‌-ಬಿಜೆಪಿ ವರಿಷ್ಠರೊಂದಿಗೆ ಚರ್ಚಿಸಿ ರಾಜ್ಯಾದ್ಯಂತ ಹೋರಾಟ ಮುಂದುವರೆಸುತ್ತೇವೆ.

-ಸಿ.ಬಿ.ಸುರೇಶ್‌ ಬಾಬು, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ.