ದೊಡ್ಡ ಗೌಡರನ್ನು ಎದುರು ಹಾಕ್ಕೋಳೋದು ಬಹಳ ಕಷ್ಟ!

First Published 12, Jun 2018, 4:35 PM IST
It is difficult to oppose JDS Supremo Deve Gowda's Decision
Highlights

‘ಏನ್ ಮಾಡೋದು ರೀ.. ರೇವಣ್ಣ  ಅಂದ್ರೆ ನಮ್ಮ ದೊಡ್ಡ ಗೌಡರಿಗೆ ಬಹಳಾನೇ ಮುದ್ದು. ನಾವು ಎದುರು ಹಾಕಿಕೊಂಡರೆ ಕಷ್ಟ. ಅಡ್ಜಸ್ಟ್ ಮಾಡಿಕೊಳ್ಳಲೇಬೇಕು’ ಎಂದು ಬುದ್ಧಿವಾದ ಹೇಳಿದರಂತೆ. ಯಾರು ಹೇಳಿದ್ದು? ಯಾಕೆ ಹೇಳಿದ್ದು? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ.  

ಬೆಂಗಳೂರು (ಜೂ. 12): ಧರ್ಮಸಿಂಗ್ ಸರ್ಕಾರದ ಸಮಯದಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕರೊಬ್ಬರು ಮಂತ್ರಿ ಎಂ ಪಿ ಪ್ರಕಾಶ್ ಅವರಿಗೆ ಉತ್ತರ ಕರ್ನಾಟಕದ ಕೆಲ ಹೆಸರುಗಳನ್ನು ಹೇಳಿ ಇವರನ್ನು ನಿಗಮ ಮಂಡಳಿಗೆ ನೇಮಕ ಮಾಡಿ ಎಂದು ವಿನಂತಿಸಿದ್ದರಂತೆ.

ಕಾಂಗ್ರೆಸ್‌ನ ಸಜ್ಜನ ರಾಜಕಾರಣಿ ಎನಿಸಿಕೊಂಡ ಈ ನಾಯಕರಿಗೆ ಪ್ರಕಾಶ್ ಬಗ್ಗೆ ಬಹಳ  ಗೌರವ. ಒಂದು ರಾತ್ರಿ ರೇವಣ್ಣ ಕಾಂಗ್ರೆಸ್‌ನ ಈ ನಾಯಕರಿಗೆ ಫೋನ್ ಮಾಡಿ ನಿಮ್ಮ ಮನೆಗೆ ಬರುತ್ತಿದ್ದೇನೆ ಎಂದು ಹೇಳಿ ಹತ್ತು ನಿಮಿಷದಲ್ಲಿ ಹಾಜರಾದರಂತೆ. ‘ಸರ್ ಪ್ರಕಾಶ್ ಹತ್ತಿರ ನೀವು ಹೆಸರು ಹೇಳಿದ್ರಿ ನೋಡಿ. ಅಧ್ಯಕ್ಷ, ಉಪಾಧ್ಯಕ್ಷ ಇವರು ಆಗಬಹುದಾ’ ಎಂದು ಹೇಳಿದ ರೇವಣ್ಣ, ‘ನಿಮ್ಮ ಎರಡು ಹೆಸರು ಹೇಳಿ’ ಎಂದು ಕೇಳಿಕೊಂಡು ಎಲ್ಲಾ ಹೆಸರುಗಳನ್ನೂ ಕಾಗದದ ಮೇಲೆ ಬರೆದರಂತೆ. ಅಧ್ಯಕ್ಷ, ಉಪಾಧ್ಯಕ್ಷ,  ಕಾರ್ಯದರ್ಶಿ ಮೂವರೂ ಹಾಸನದವರೇ ಎಂದು ಬೇರೆ ಹೇಳಬೇಕಾಗಿಲ್ಲ. ಆದರೆ ಮಜಾ ಇರುವುದೇ ಕೊನೆಯಲ್ಲಿ.

ಯಾವುದೋ ಹಾಳೆ ಮೇಲೆ ಬರೆದುಕೊಂಡಿರಬಹುದು ಎಂದು ಕಾಂಗ್ರೆಸ್ ನಾಯಕರು ಆ ಹಾಳೆ ತಿರುವಿ ನೋಡಿದರೆ ಸಾಕ್ಷಾತ್ ಎಂ ಪಿ ಪ್ರಕಾಶ್ ಅವರ ಸಹಿ ಇದ್ದ ಸರ್ಕಾರಿ ಲೆಟರ್ ಹೆಡ್ ಅದು! ಇದನ್ನೆಲ್ಲಾ ನೋಡಿ ಕಾಂಗ್ರೆಸ್‌ನ ಮಹಾಶಯರು ಎಂ ಪಿ ಪ್ರಕಾಶ್ ಅವರಿಗೆ ಫೋನ್ ಮಾಡಿದರೆ ಪ್ರಕಾಶ್, ‘ಏನ್ ಮಾಡೋದು ರೀ.. ರೇವಣ್ಣ ಅಂದ್ರೆ ನಮ್ಮ ದೊಡ್ಡ ಗೌಡರಿಗೆ ಬಹಳಾನೇ ಮುದ್ದು. ನಾವು ಎದುರು ಹಾಕಿಕೊಂಡರೆ ಕಷ್ಟ. ಅಡ್ಜಸ್ಟ್ ಮಾಡಿಕೊಳ್ಳಲೇಬೇಕು’ ಎಂದು ಬುದ್ಧಿವಾದ ಹೇಳಿದರಂತೆ. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

loader