ಬೆಂಗಳೂರು[ಏ.28]: ಬೇನಾಮಿ ಆಸ್ತಿ ಹೊಂದಿರುವ ಆರೋಪದ ಮೇರೆಗೆ ಸಚಿವ ಡಿ.ಕೆ.ಶಿವಕುಮಾರ್‌ಗೆ ಸೇರಿದ 75 ಕೋಟಿ ರು. ಮೌಲ್ಯದ ಆಸ್ತಿಯನ್ನು ಕಳೆದ ತಿಂಗಳಷ್ಟೇ ಜಪ್ತಿ ಮಾಡಿದ್ದ ಆದಾಯ ತೆರಿಗೆ ಇಲಾಖೆಯು (ಐಟಿ) ಇದೀಗ ಅವರ ತಾಯಿ ಹೆಸರಲ್ಲಿರುವ ಕೋಟ್ಯಂತರ ರು. ಮೌಲ್ಯದ 20 ಎಕರೆ ಜಮೀನು ಖರೀದಿಗೆ ಸೂಕ್ತ ದಾಖಲೆ ನೀಡುವಂತೆ ನೋಟಿಸ್‌ ಜಾರಿಗೊಳಿಸಿದೆ.

ಶಿವಕುಮಾರ್‌ ತಾಯಿ ಗೌರಮ್ಮ ಅವರಿಗೆ ಐಟಿ ಇಲಾಖೆಯು ಈ ಹಿಂದೆಯೂ ನೋಟಿಸ್‌ ನೀಡಿ ಮಾಹಿತಿ ಪಡೆದುಕೊಂಡಿತ್ತು. ಇದೀಗ ಎರಡನೇ ಬಾರಿಗೆ ನೋಟಿಸ್‌ ಜಾರಿಗೊಳಿಸಿ ವಿವರಣೆ ಕೇಳಿದೆ. ಖರೀದಿಸಲಾಗಿರುವ 20 ಎಕರೆ ಜಮೀನಿನ ಸಂಬಂಧ ಸಮರ್ಪಕವಾದ ದಾಖಲೆಗಳನ್ನು ಮುಂದಿನ ಮೂರು ತಿಂಗಳಲ್ಲಿ ಒದಗಿಸುವಂತೆ ಸೂಚನೆ ನೀಡಿದೆ. ಒಂದು ವೇಳೆ ಸೂಕ್ತ ದಾಖಲೆ ಒದಗಿಸದಿದ್ದಲ್ಲಿ ಆ ಆಸ್ತಿಯನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ ಎಂದು ಐಟಿ ಮೂಲಗಳು ತಿಳಿಸಿವೆ.

2017ರ ಆಗಸ್ಟ್‌ ತಿಂಗಳಲ್ಲಿ ಐಟಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ 400 ಕೋಟಿ ರು.ಗಿಂತ ಅಧಿಕ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳಲಾಗಿತ್ತು. ತನಿಖೆ ಮುಂದುವರಿಸಿದಾಗ ಬೇನಾಮಿ ಆಸ್ತಿ ಇರುವುದು ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ.

ಶಿವಕುಮಾರ್‌ ಅವರು ತಾಯಿ, ಪತ್ನಿ ಸೇರಿದಂತೆ ಇತರರ ಹೆಸರಲ್ಲಿ ಆಸ್ತಿ ಮಾಡಿರುವುದು ಕಂಡುಬಂದಿದೆ. ಹಣ ಮೂಲದ ಮಾಹಿತಿ ನೀಡದಿದ್ದರೆ ಶಿವಕುಮಾರ್‌ ತಾಯಿ ಗೌರಮ್ಮ ಹೆಸರಲ್ಲಿರುವ ಆಸ್ತಿಯನ್ನು ಮುಟ್ಟಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಐಟಿ ಇಲಾಖೆಯು ಮಾಹಿತಿ ನೀಡಿದೆ.