ದಿಢೀರ್ ದಾಳಿಯಿಂದ ಕಂಗೆಟ್ಟ ಸಾಕಷ್ಟು ಜನರು ಸಮೀಪದಲ್ಲಿದ್ದ ಬೋಸ್ಪೋರಸ್ ನದಿಗೆ ಹಾರಿ ಜೀವ ಉಳಿಸಿಕೊಳ್ಳಲು ಯತ್ನಿಸಿದ್ದಾರೆ.
ಇಸ್ತಾಂಬುಲ್(ಜ. 01): ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ನೈಟ್'ಕ್ಲಬ್'ವೊಂದರ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದು, 35ಕ್ಕೂ ಹೆಚ್ಚು ಜನರು ಬಲಿಯಾದ ದಾರುಣ ಘಟನೆ ಟರ್ಕಿ ದೇಶದಲ್ಲಿ ಸಂಭವಿಸಿದೆ. ಒಬ್ಬ ಶಂಕಿತ ಉಗ್ರ ನಡೆಸಿದ ಈ ಘೋರ ದಾಳಿಯಲ್ಲಿ ಇನ್ನೂ 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಇಸ್ತಾಂಬುಲ್'ನ ಓರ್ಟಾಕೋಯ್ ಜಿಲ್ಲೆಯಲ್ಲಿರುವ ರೀನಾ ನೈಟ್ ಕ್ಲಬ್'ನಲ್ಲಿ ಸುಮಾರು 600 ಜನರಿದ್ದರೆನ್ನಲಾಗಿದೆ.
ಇಸ್ತಾಂಬುಲ್'ನ ಗವರ್ನರ್ ವಾಸಿಪ್ ಸಾಹಿನ್ ನೀಡಿರುವ ಮಾಹಿತಿ ಪ್ರಕಾರ, ಸಾಂಟಾ ಕ್ಲಾಸ್'ನ ವೇಷ ಧರಿಸಿ ಬಂದೂಕು ಬಚ್ಚಿಟ್ಟುಕೊಂಡು ಬಂದಿದ್ದ ಶಂಕಿತ ಉಗ್ರ ಮೊದಲಿಗೆ ನೈಟ್'ಕ್ಲಬ್'ನ ಹೊರಗಿದ್ದ ಪೊಲೀಸ್ ಪೇದೆ ಮತ್ತು ಓರ್ವ ನಾಗರಿಕನನ್ನು ಹತ್ಯೆಗೈದಿದ್ದಾನೆ. ಆನಂತರ, ನೈಟ್'ಕ್ಲಬ್'ನೊಳಕ್ಕೆ ನುಗ್ಗಿದ ಆ ವ್ಯಕ್ತಿಯು, ಹೊಸ ವರ್ಷದ ಆಚರಣೆಯ ಖುಷಿಯಲ್ಲಿದ್ದ ಜನರ ಮೇಲೆ ಮನಬಂದಂತೆ ಗುಂಡುಗಳ ದಾಳಿ ಎಸಗಿದ್ದಾನೆ. ದಿಢೀರ್ ದಾಳಿಯಿಂದ ಕಂಗೆಟ್ಟ ಸಾಕಷ್ಟು ಜನರು ಸಮೀಪದಲ್ಲಿದ್ದ ಬೋಸ್ಪೋರಸ್ ನದಿಗೆ ಹಾರಿ ಜೀವ ಉಳಿಸಿಕೊಳ್ಳಲು ಯತ್ನಿಸಿದ್ದಾರೆ.
ದಾಳಿ ನಡೆಸಿದ ಶಂಕಿತ ಉಗ್ರಗಾಮಿ ಈಗಲೂ ನೈಟ್'ಕ್ಲಬ್'ನಲ್ಲೇ ಅಡಗಿಕೊಂಡಿರುವ ಸಾಧ್ಯತೆ ಇದೆ ಎಂದು ಟರ್ಕಿಯ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಪೊಲೀಸರು ಈಗಲೂ ಕಾರ್ಯಾಚರಣೆ ನಡೆಸುತ್ತಿದ್ದಾರೆನ್ನಲಾಗಿದೆ.
ಟರ್ಕಿ ದೇಶದಲ್ಲಿ, ಅದರಲ್ಲೂ ಇಸ್ತಾಂಬುಲ್ ಹಾಗೂ ಅಂಕಾರದಲ್ಲಿ ಕಳೆದ ವರ್ಷದ ಹಲವು ಬಾರಿ ಉಗ್ರಗಾಮಿಗಳ ದಾಳಿಗಳಾಗಿವೆ. ಇಸ್ಲಾಮಿಕ್ ಸ್ಟೇಟ್ ಹಾಗೂ ಕುರ್ಡಿಷ್ ಬಂಡುಕೋರರು ಪದೇಪದೇ ದಾಳಿ ಎಸಗುತ್ತಿದ್ದಾರೆ. ನಿನ್ನೆ ರಾತ್ರಿ ದಾಳಿ ಸಂಭವಿಸಿದ ನೈಟ್'ಕ್ಲಬ್'ನ ಸಮೀಪದಲ್ಲೇ ಇರುವ ಫುಟ್ಬಾಲ್ ಸ್ಟೇಡಿಯಂ ಬಳಿ ಇತ್ತೀಚೆಗಷ್ಟೇ ಆತ್ಮಹತ್ಯಾ ದಾಳಿ ಸಂಭವಿಸಿ ಹತ್ತಾರು ಮಂದಿ ಬಲಿಯಾಗಿದ್ದರು. ಹೊಸ ವರ್ಷದ ದಿನದಂದು ಉಗ್ರರು ದಾಳಿ ನಡೆಸಬಹುದೆಂದು ಟರ್ಕಿಯ ಗುಪ್ತಚರರು ಎಚ್ಚರಿಸಿದ ಹಿನ್ನೆಲೆಯಲ್ಲಿ ಟರ್ಕಿಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಆದರೂ ಕೂಡ ನೈಟ್ ಕ್ಲಬ್ ಮೇಲೆ ಶಂಕಿತ ಉಗ್ರ ದಾಳಿ ನಡೆಸಿದ್ದಾನೆ.
