ಏಪ್ರಿಲ್‌ನಲ್ಲಿ ಚಂದ್ರಯಾನ ಮುಹೂರ್ತ : ಬೇರಾವ ದೇಶವೂ ಹೋಗದ ಜಾಗಕ್ಕೆ ನೌಕೆ

news | Sunday, February 18th, 2018
Suvarna Web Desk
Highlights

ಅತ್ಯಂತ ಕಡಿಮೆ ವೆಚ್ಚದಲ್ಲಿ ಚಂದ್ರಯಾನ-1 ನಡೆಸಿ ಜಗತ್ತೇ ಹುಬ್ಬೇರಿಸುವಂತೆ ಮಾಡಿದ್ದ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಚಂದ್ರಯಾನ-2 ಯಾತ್ರೆಗೆ ಮುಹೂರ್ತ ಅಂತಿಮಗೊಳಿಸಿದೆ.

ಬೆಂಗಳೂರು : ಅತ್ಯಂತ ಕಡಿಮೆ ವೆಚ್ಚದಲ್ಲಿ ಚಂದ್ರಯಾನ-1 ನಡೆಸಿ ಜಗತ್ತೇ ಹುಬ್ಬೇರಿಸುವಂತೆ ಮಾಡಿದ್ದ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಚಂದ್ರಯಾನ-2 ಯಾತ್ರೆಗೆ ಮುಹೂರ್ತ ಅಂತಿಮಗೊಳಿಸಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಚಂದ್ರನ ಮೇಲೆ ರೋವರ್‌ (ಚಲಿಸುವ ಯಂತ್ರ) ಇಳಿಸುವುದಾಗಿ ಇಸ್ರೋ ಹೇಳಿಕೊಂಡಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್‌ ಇಳಿಸಲು ಇಸ್ರೋ ನಿರ್ಧರಿಸಿದ್ದು, ಈ ಜಾಗ ಲಕ್ಷಾಂತರ ವರ್ಷಗಳ ಹಿಂದೆ ರೂಪುಗೊಂಡ ಕಡಿದಾದ ಬಂಡೆಗಳಿಂದ ಕೂಡಿದೆ. ಜಗತ್ತಿನ ಬೇರಾವುದೇ ದೇಶದವರು ಈ ಭಾಗಕ್ಕೆ ನೌಕೆಯನ್ನು ಇಳಿಸಿಲ್ಲ. ಅವರೆಲ್ಲ ಹೆಚ್ಚಾಗಿ ಚಂದ್ರನ ಸಮಭಾಜಕ ಪ್ರದೇಶದ ಆಸುಪಾಸಿನಲ್ಲೇ ಸಂಶೋಧನೆ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ದಕ್ಷಿಣ ಧ್ರುವದಲ್ಲಿ ಯಂತ್ರವನ್ನು ಇಳಿಸಲು ಇಸ್ರೋ ನಿರ್ಧರಿಸಿದ್ದು, ಅಲ್ಲಿ ನಡೆಸುವ ಸಂಶೋಧನೆಯಿಂದ ಜಗತ್ತಿನ ಉಗಮ ಹೇಗಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು ಎಂದು ಇಸ್ರೋದ ನೂತನ ಚೇರ್ಮನ್‌ ಕೆ. ಶಿವನ್‌ ಹೇಳಿದ್ದಾರೆ.

ಚಂದ್ರಯಾನ-1ರಲ್ಲಿ ಇಸ್ರೋ ಚಂದ್ರನ ಮೇಲೆ ಮೊಟ್ಟಮೊದಲ ಬಾರಿಗೆ ನೀರಿರುವುದನ್ನು ಪತ್ತೆಹಚ್ಚಿತ್ತು. ಅದು ಜಗತ್ತಿನಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ನಡೆಸಲಾದ ಚಂದ್ರಯಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಇದೀಗ ಚಂದ್ರಯಾನ-2 ಯೋಜನೆಗೆ ಇಸ್ರೋ ಸುಮಾರು 800 ಕೋಟಿ ರು. ವೆಚ್ಚ ಮಾಡುತ್ತಿದೆ. ಚಂದ್ರಯಾನ ಕೈಗೊಳ್ಳಲು ಈ ವರ್ಷದ ಏಪ್ರಿಲ್‌ ಅಥವಾ ನವೆಂಬರ್‌ ತಿಂಗಳು ಪ್ರಶಸ್ತವಾಗಿವೆ. ಒಂದು ವೇಳೆ ಏಪ್ರಿಲ್‌ನಲ್ಲಿ ಸಾಧ್ಯವಾಗದೇ ಇದ್ದರೆ ನವೆಂಬರ್‌ನಲ್ಲಿ ನಡೆಸುವುದಾಗಿ ಇಸ್ರೋ ಹೇಳಿಕೊಂಡಿದೆ.

‘ಚಂದ್ರಯಾನ-2 ಯೋಜನೆಯು ಚಂದ್ರಯಾನ-1 ಯೋಜನೆಯ ಮುಂದುವರಿದ ಭಾಗ. ನಾವು ಚಂದ್ರನ ಮೇಲೆ ಇಳಿಸುತ್ತಿರುವ ನೌಕೆಯು ಚಂದ್ರನ ಮೇಲೆ ಮನುಷ್ಯನನ್ನು ಇಳಿಸಿದಷ್ಟೇ ನಿಖರ ಫಲಿತಾಂಶವನ್ನು ನೀಡುತ್ತದೆ’ ಎಂದು ಶಿವನ್‌ ತಿಳಿಸಿದ್ದಾರೆ.

Comments 0
Add Comment

  Related Posts

  India Today Karnataka Prepoll 2018 Part 2

  video | Friday, April 13th, 2018

  Election Bulletin News Part 2

  video | Wednesday, April 11th, 2018

  India Today Karnataka Prepoll 2018 Part 2

  video | Friday, April 13th, 2018
  Suvarna Web Desk