ಇಸ್ರೇಲ್[ಜೂ.17]: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಪತ್ನಿ ಸಾರಾ ನೆತನ್ಯಾಹು ತಪ್ಪಿತಸ್ಥೆ ಎಂದು ಸಾರಿರುವ ನ್ಯಾಯಾಲಯ ಭಾರೀ ದಂಡ ವಿಧಿಸಿದೆ. ಷ್ಟಕ್ಕೂ ಅವರು ಮಾಡಿದ ತಪ್ಪೇನು? ಇಲ್ಲಿದೆ ನೋಡಿ ವಿವರ

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕಚೇರಿಯಲ್ಲಿ ಮುಖ್ಯ ಬಾಣಸಿಗ ಸೇರಿದಂತೆ ಅಡುಗೆ ವ್ಯವಸ್ಥೆ ಇದೆ. ಹೀಗಿದ್ದರೂ ಸಾರಾ ನೆತಾನ್ಯಾಹು 2010ರ ಸೆಪ್ಟೆಂಬರ್‌ನಿಂದ 2013ರ ಮಾರ್ಚ್‌ ನಡುವೆ ಹೊರಗಿನಿಂದ ಊಟ ತರಿಸಿದ್ದರು. ಈ ಮೂಲಕ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ, ಇದು ಅಪರಾಧ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ಅನ್ವಯ 2018ರಲ್ಲಿ ಸಾರಾ ಮೇಲೆ ವಂಚನೆ ಮತ್ತು ವಿಶ್ವಾಸದ್ರೋಹದ ಪ್ರಕರಣ ದಾಖಲಾಗಿತ್ತು. ವಿಚಾರಣೆಯ ವೇಳೆ ಭ್ರಷ್ಟಾಚಾರದ ಆರೋಪವನ್ನೂ ಮಾಡಲಾಗಿತ್ತು. 

ಆದರೀಗ ಅಂತಿಮ ತೀರ್ಪು ಹೊರ ಬಿದ್ದಿದ್ದು, ಸಾರಾ ಮೇಲಿನ ಭ್ರಷ್ಟಾಚಾರ ಆರೋಪ ರದ್ದುಪಡಿಸಲಾಗಿದೆ. ಆದರೆ ಊಟದ ವ್ಯವಸ್ಥೆಗಾಗಿ ಖರ್ಚು ಮಾಡಲಾಗಿರುವ 8.72 ಲಕ್ಷ ರೂಪಾಯಿ ಹಣವನ್ನು ಖಜಾನೆಗೆ ತುಂಬುವಂತೆ ಸೂಚಿಸಲಾಗಿದೆ. ಅಲ್ಲದೇ 1.93 ಲಕ್ಷ ರೂಪಾಯಿ ಮೊತ್ತವನ್ನು ದಂಡ ರೂಪದಲ್ಲಿ ಕಟ್ಟಲು ಸೂಚಿಸಲಾಗಿದೆ. ಇದರ ಅನ್ವಯ ತಾನು ಈ ದಂಡದ ಮೊತ್ತವನ್ನು 9 ಕಂತುಗಳಲ್ಲಿ ತುಂಬುವುದಾಗಿ ಸಾರಾ ತಿಳಿಸಿದ್ದಾರೆ.