ಕೊಲಂಬೋ[ಜೂ.23]: ಭಾರತೀಯರು ಸೇರಿ 250ಕ್ಕೂ ಹೆಚ್ಚು ಬಲಿ ಪಡೆದ ಲಂಕಾ ಸರಣಿ ಸ್ಫೋಟದ ಹೊಣೆಯನ್ನು ಐಸಿಸ್‌ ಉಗ್ರ ಸಂಘಟನೆ 48 ಗಂಟೆಗಳ ಕಾಲ ತಡವಾಗಿ ಏಕೆ ಹೊತ್ತುಕೊಂಡಿತ್ತು ಎಂಬ ರಹಸ್ಯ ಇದೀಗ ಬಯಲಾಗಿದೆ. ಲಂಕಾ ಸರಣಿ ಬಾಂಬ್‌ ಸ್ಫೋಟ ಸಂಭವಿಸುವವರೆಗೂ ಐಸಿಸ್‌ ಸಂಘಟನೆಗೆ ಕೊಂಚವೂ ಮಾಹಿತಿಯೇ ಇರಲಿಲ್ಲ. ಆ ಸಂಘಟನೆಯ ಮುಖ್ಯಸ್ಥ ಅಬು ಬಕರ್‌ ಅಲ್‌ ಬಾಗ್ದಾದಿಗೂ ಲಂಕಾ ಸ್ಫೋಟದ ಯಾವ ಮಾಹಿತಿಯೂ ಗೊತ್ತಿರಲಿಲ್ಲ. ಆದಾಗ್ಯೂ ಆ ದಾಳಿಯ ಹೊಣೆಯನ್ನು ಐಸಿಸ್‌ ಹೊತ್ತುಕೊಂಡಿತ್ತು. ಇದಕ್ಕೆ ಲಂಕಾದ ಇಸ್ಲಾಮಿಕ್‌ ಮೂಲಭೂತವಾದಿಯೊಬ್ಬನ ಒತ್ತಡ ಕಾರಣ ಎಂಬ ಕುತೂಹಲಕಾರಿ ಮಾಹಿತಿ ತನಿಖೆ ವೇಳೆ ಪತ್ತೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ತನಿಖಾಧಿಕಾರಿಯೊಬ್ಬರು, ‘ದಾಳಿ ಬಳಿಕ ಐಸಿಸ್‌ ಸಂಘಟನೆ ಬಗ್ಗೆ ಸಹಾನುಭೂತಿ ಹೊಂದಿದ ಸ್ಥಳೀಯ ಇಸ್ಲಾಂ ಮೂಲಭೂತವಾದಿಯೊಬ್ಬ ಮೂರನೇ ವ್ಯಕ್ತಿಯ ಸಹಾಯದ ಮೂಲಕ ಐಸಿಸ್‌ ನಾಯಕತ್ವದ ಜೊತೆ ಸಂಪರ್ಕ ಸಾಧಿಸಿದ್ದ. ಈ ವೇಳೆ ಆತ್ಮಾಹುತಿ ದಾಳಿ ಹೊಣೆಯನ್ನು ಹೊತ್ತುಕೊಳ್ಳುವಂತೆ ಐಸಿಸ್‌ಗೆ ಬೇಡಿಕೊಂಡಿದ್ದ. ಹೀಗಾಗಿಯೇ ಐಸಿಸ್‌ ಈ ದಾಳಿ ಹೊಣೆಯನ್ನು ಹೊತ್ತಿತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ’ ಎಂದಿದ್ದಾರೆ.

ಇದಕ್ಕೆ ಪೂರಕವೆಂಬಂತೆ, ಏ.21ರಂದು ನಡೆದ ಲಂಕಾ ಸರಣಿ ಸ್ಫೋಟ ಘಟಿಸಿ 48 ಗಂಟೆ ಬಳಿಕ ಈ ದಾಳಿಯ ಹೊಣೆಯನ್ನು ಐಸಿಸ್‌ ಹೊತ್ತುಕೊಂಡಿತ್ತು. ಅಲ್ಲದೆ, ಲಂಕಾದ ನ್ಯಾಷನಲ್‌ ತೌಹೀದ್‌ ಜಮಾತ್‌(ಎನ್‌ಟಿಜೆ) ಉಗ್ರ ಸಂಘಟನೆ ನಾಯಕ ಜಹ್ರಾನ್‌ ಹಷಿಂ ಎಂಬುವನ ಒಬ್ಬನ ಮುಖ ಹೊರತುಪಡಿಸಿ ಉಳಿದ ಉಗ್ರರ ಮುಖಗಳನ್ನು ಮುಚ್ಚಿದ ಫೋಟೋವೊಂದನ್ನು ಐಸಿಸ್‌ ಬಿಡುಗಡೆ ಮಾಡಿತ್ತು.