ನವದೆಹಲಿ(ಜು.7): ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಮತ್ತೆ ವಿಚಾರಣೆ ಆರಂಭವಾಗಿದೆ. ಈ ನಡುವೆ ಬಾಬ್ರಿ ಮಸೀದಿ ಪರ ವಕೀಲ ರಾಜೀವ್ ಧವನ್, ಮುಸ್ಲಿಮರ ಪ್ರಾರ್ಥನೆ ಕುರಿತು 1994ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ನಡೆಸಬೇಕು ಎಂಧು ಕೋರಿದ್ದಾರೆ.

ಮುಸ್ಲಿಮರು ತಮ್ಮ ಪವಿತ್ರ ಪ್ರಾರ್ಥನೆ ಅಥವಾ ನಮಾಜ್ ಮಾಡಲು ಮಸೀದಿಯ ಅಗತ್ಯವಿಲ್ಲ ಎಂದು 1994ರಲ್ಲಿ ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿತ್ತು. ಈ ತೀರ್ಪಿನ ಆಧಾರದ ಮೇಲೆಯೇ ಅಲಹಬಾದ್ ಹೈಕೋರ್ಟ್ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಅಂತಿಮ ತೀರ್ಪನ್ನು ನೀಡಿತ್ತು. ಇವೆರೆಡೂ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ರಾಜೀವ್ ಧವನ್ ಇದೀಗ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದಾರೆ.

1994ರ ಸುಪ್ರಿಂ ಕೋರ್ಟ್ ತೀರ್ಪು ಭಾರತದಲ್ಲಿ ಇಸ್ಲಾಂ ಸರ್ವನಾಶ ಹೊಂದಲು ಕಾರಣವಾಗುತ್ತದೆ. ಮುಸ್ಲಿಮರು ಮಸೀದಿಯಲ್ಲೇ ತಮ್ಮ ಪ್ರಾರ್ಥನೆ ಮಾಡಬೇಕು ಎಂದು ರಾಜೀವ್ ಧವನ್ ಹೇಳಿದ್ದಾರೆ. 1994ರ ತೀರ್ಪು ಬಾಬ್ರಿ ಮಸೀದಿಗಾಗಿ ನ್ಯಾಯಾಲಯದಲ್ಲಿ ಹೋರಾಡಲು ನಮಗೆ ಅಡ್ಡಿಯಾಗಿದೆ ಎಂದೂ ರಾಜೀವ್ ಹೇಳಿದ್ದಾರೆ.

ಮುಸ್ಲಿಮರಿಗೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಇಲ್ಲ ಅಂತಾದರೆ ಈ ದೇಶದಲ್ಲಿ ಇಸ್ಲಾಂ ಕುಸಿತ ಕಾಣಲಿದೆ ಎಂದು ಸುಪ್ರೀಂ ಕೋರ್ಟ್ ಗೆ ರಾಜೀವ್ ಧವನ್ ಹೇಳಿದ್ದಾರೆ. ಮಸೀದಿಯಲ್ಲಿ ಸಭೆ, ಪ್ರಾರ್ಥನೆ ನಡೆಸುವುದು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಾಗಿದ್ದು, ಈ ಹಕ್ಕನ್ನು ಕಸಿದುಕೊಂಡರೆ ಇಸ್ಲಾಂ ಈ ದೇಶದಿಂದಲೇ ನಶಿಸಿ ಹೊಗುತ್ತದೆ ಎಂದು ಅವರು ವಾದ ಮಂಡಿಸಿದ್ದಾರೆ.