ಮಂಗಳೂರಿನ ಸೌತ್ ಕೆನರಾ ಸಲಫಿ ಸಂಘಟನೆಯ ಮುಖಂಡ ಇಸ್ಮಾಯಿಲ್ ಶಾಫಿ ಎಂಬುವರು ಬ್ಯಾರಿ ಭಾಷೆಯಲ್ಲಿ ಈ ಭಾಷಣ ಮಾಡಿದ್ದು, ಇದರ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆ, ವಿವಾದ ಸೃಷ್ಟಿಸಿದೆ.

ಮಂಗಳೂರು(ಅ.04): ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೆಲ ಯುವಕರು ದಿಢೀರ್ ನಾಪತ್ತೆಯಾಗಿ ಐಸಿಸ್ ಉಗ್ರ ಸಂಘಟನೆಗೆ ಸೇರಿದ್ದಾರೆಂಬ ಸುದ್ದಿ ಭಾರೀ ಆತಂಕ ಸೃಷ್ಟಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್‌'ನಲ್ಲೂ ಇದೇ ಮಾದರಿಯಲ್ಲಿ ಯುವಕರ ಹಾದಿ ತಪ್ಪಿಸುವ ಗುಂಪೊಂದು ಕಾರ್ಯಾಚರಿಸುತ್ತಿದ್ದು, ಇದರ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ಮಾಡಿರುವ ಭಾಷಣದ ಆಡಿಯೋ ಈಗ ವೈರಲ್ ಆಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಎಸ್‌ಪಿ ಸುಧೀರ್ ರೆಡ್ಡಿ, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮಂಗಳೂರಿನ ಸೌತ್ ಕೆನರಾ ಸಲಫಿ ಸಂಘಟನೆಯ ಮುಖಂಡ ಇಸ್ಮಾಯಿಲ್ ಶಾಫಿ ಎಂಬುವರು ಬ್ಯಾರಿ ಭಾಷೆಯಲ್ಲಿ ಈ ಭಾಷಣ ಮಾಡಿದ್ದು, ಇದರ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆ, ವಿವಾದ ಸೃಷ್ಟಿಸಿದೆ. ಸದ್ಯ ಈ ಆಡಿಯೋ ದ.ಕ. ಜಿಲ್ಲಾ ಪೊಲೀಸರ ಗಮನಕ್ಕೂ ಬಂದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

ಐಸಿಸ್‌'ನಂತೆ ವಸ್ತ್ರ: ಸಲಫೀ ದಮ್ಮಾಜ್ ಎಂಬ ತೀವ್ರವಾದಿ ಸಿದ್ಧಾಂತದಿಂದ ಪ್ರಭಾವಿತರಾಗಿ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸುತ್ತ ಮುತ್ತ ಕಾರ್ಯಾಚರಣೆ ನಡೆಸುತ್ತಿರುವ ಯುವಕರ ಗುಂಪೊಂದು ವಿದ್ಯಾರ್ಥಿಗಳ ಬ್ರೈನ್‌'ವಾಶ್ ಮಾಡುತ್ತಿದೆ. ಐಸಿಸ್ ಮಾದರಿಯಲ್ಲೇ ವಸ್ತ್ರ ಧರಿಸುವ ಇವರು ಕಪ್ಪು ಅಥವಾ ಕಂದು ಬಣ್ಣದ ಪೈಜಾಮಾ ಧರಿಸುತ್ತಾರೆ. ತಲೆಗೆ ಮುಂಡಾಸು ಅಥವಾ ಟೊಪ್ಪಿ ತೊಡುತ್ತಾರೆ. ಬಿ.ಸಿ.ರೋಡ್, ಕಲ್ಲಡ್ಕ, ಮಾರಿಪಳ್ಳ, ಉಳ್ಳಾಲದಲ್ಲಿ ಇಂಥ ಯುವಕರ ಗುಂಪು ಇದೆ ಎಂದು ಆಡಿಯೋದಲ್ಲಿ ಇಸ್ಮಾಯಿಲ್ ಹೇಳಿದ್ದಾರೆ.

ಇವರು ಮಹಿಳೆಯರು ಇಡೀ ದೇಹವನ್ನು ಸಂಪೂರ್ಣ ಮುಚ್ಚುವಂತೆ ವಸ್ತ್ರ ಧರಿಸಲು ತಾಕೀತು ಮಾಡುತ್ತಿದ್ದಾರೆ. ಮಹಿಳೆಯರು ಮನೆಯಲ್ಲಿ ಗಂಡನನ್ನು ಹೊರತು ಯಾರ ಜೊತೆಗೂ ಮಾತನಾಡದಂತೆ ಗೃಹಬಂಧನ ವಿಧಿಸುತ್ತಿದ್ದಾರೆ. ಇವರ ಪ್ರಕಾರ ಮುಸ್ಲಿಂ ಪುರುಷರು ಇತರ ಧರ್ಮದವರ ಜೊತೆ ಮಾತನಾಡುವುದೂ ತಪ್ಪು. ಹಿಂದೂಗಳ ಜೊತೆ ನಗುವುದು ಹರಾಮ್ ಎಂದು ಹೇಳಿ ಈ ಗುಂಪಿನ ಸದಸ್ಯರು ಕೇರಳದಲ್ಲಿ ಬಂಧನಕ್ಕೂ ಒಳಗಾಗಿದ್ದರು. ಈ ಗುಂಪೊಂದರ ಮಸೀದಿ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‌'ನಲ್ಲಿದೆ. ಅಲ್ಲಿ ಇವರು ಗುಪ್ತವಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದೂ ಆಡಿಯೋದಲ್ಲಿ ಹೇಳಲಾಗಿದೆ.