‘ಹಲಾಲ್ ದಸ್ತಾ’ ಸೃಷ್ಟಿಸಿದ ಐಎಸ್‌ಐ | ಭಾರತೀಯ ಸೇನೆಯೇ ಇದರ ಗುರಿ

ನವದೆಹಲಿ: ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್’ನಂತಹ ಉಗ್ರ ಸಂಘಟನೆಗಳನ್ನು ಪೋಷಿಸಿ, ಭಾರತದ ಮೇಲೆ ದಾಳಿಗೆ ಛೂ ಬಿಡುತ್ತಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಇದೀಗ ಹೊಸ ಉಗ್ರಗಾಮಿ ಸಂಘಟನೆಯೊಂದನ್ನು ಹುಟ್ಟುಹಾಕಿದೆ.

ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ದಾಳಿ ನಡೆಸಿ ಭಾರತೀಯ ಸೇನೆಗೆ ಸಾಧ್ಯವಿರುವಷ್ಟೂ ಹಾನಿ ಉಂಟು ಮಾಡುವ ಗುರಿಯೊಂದಿಗೆ ‘ಹಲಾಲ್ ದಸ್ತಾ’ (ಹಂತಕ ಪಡೆ) ಎಂಬ ಸಂಘಟನೆಯೊಂದಕ್ಕೆ ಜನ್ಮ ನೀಡಿದೆ.

ನಿಷೇಧಿತ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಸದಸ್ಯರೇ ಇದರಲ್ಲೂ ಸಕ್ರಿಯರಾಗಿರುತ್ತಾರೆ. ಪಾಕಿಸ್ತಾನದ ಗಡಿ ಭದ್ರತಾ ಪಡೆ ‘ಬಾರ್ಡರ್ ಆ್ಯಕ್ಷನ್ ಟೀಮ್’ (ಬ್ಯಾಟ್)ನೊಂದಿಗೆ ಸೇರಿ ಈ ಸಂಘಟನೆ ಭಾರತದ ವಿರುದ್ಧ ದಾಳಿಗಳನ್ನು ನಡೆಸಲಿದೆ.

ಜಮ್ಮು-ಕಾಶ್ಮೀರದ ಸುರಾನ್‌ಕೋಟ್ ಹಾಗೂ ಪೂಂಛ್ ಜಿಲ್ಲೆಗಳಲ್ಲಿರುವ ಗಡಿ ನಿಯಂತ್ರಣ ರೇಖೆಯ ಮೇಲೆ ದಾಳಿ ನಡೆಸಿ, ಭಾರತೀಯ ಸೇನೆಗೆ ಸಾಧ್ಯವಾದಷ್ಟೂ ಹಾನಿ ಮಾಡುವುದು ಈ ಸಂಘಟನೆಯ ಮುಖ್ಯ ಗುರಿ.

ದಾಳಿಗೆ ನೀಲನಕ್ಷೆ ರೂಪಿಸುವ ಸಲುವಾಗಿ ಐಎಸ್‌ಐ ಅಧಿಕಾರಿಗಳು ಲಷ್ಕರ್ ಎ ತೊಯ್ಬಾ ಹಾಗೂ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್‌ಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಈ ಸಭೆಯಲ್ಲಿ ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಕೂಡ ಉಪಸ್ಥಿತನಿದ್ದ ಎಂದು ಮೂಲಗಳನ್ನು ಉಲ್ಲೇಖಿಸಿ ಟೀವಿ ಚಾನೆಲೊಂದು ವರದಿ ಮಾಡಿದೆ.

ಐಎಸ್‌ಐಗೆ ಉಗ್ರಗಾಮಿ ಸಂಘಟನೆಗಳ ಜತೆ ನಂಟಿದೆ. ತನ್ನದೇ ಆದ ವಿದೇಶಾಂಗ ನೀತಿಯನ್ನು ಆ ಸಂಸ್ಥೆ ಹೊಂದಿದೆ ಎಂದು ಅಮೆರಿಕದ ಉನ್ನತಾಧಿಕಾರಿಗಳು ಹೇಳಿದ ಬೆನ್ನಲ್ಲೇ ಐಎಸ್‌ಐ ಹೊಸ ಸಂಘಟನೆ ಸೃಷ್ಟಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.