ಬೆಂಗಳೂರು (ಜು. 21): ‘ನದಿಗಳ ರಕ್ಷಿಸಿ’ ಅಭಿಯಾನದ ರೂವಾರಿ ಈಶ ಫೌಂಡೇಷನ್‌ ಸಂಸ್ಥಾಪಕ ಜಗ್ಗಿ ವಾಸುದೇವ್‌ (ಸದ್ಗುರು) ಅವರು ರಾಜ್ಯದ ಪ್ರಮುಖ ಜೀವನದಿ ಕಾವೇರಿ ಪುನಶ್ಚೇತನಕ್ಕಾಗಿ ‘ಕಾವೇರಿ ಕೂಗು’ ಎಂಬ ಮಹತ್ವಾಕಾಂಕ್ಷಿ ಅಭಿಯಾನ ರೂಪಿಸಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸದ್ಗುರು ಅವರು, ಈ ಅಭಿಯಾನದ ಅಂಗವಾಗಿ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕಾವೇರಿ ನದಿ ಪಾತ್ರದಲ್ಲಿ ಬರೋಬ್ಬರಿ 25 ಕೋಟಿ ಸಸಿಗಳನ್ನು ನೆಟ್ಟು ಪೋಷಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ.

ಜತೆಗೆ, ಸಾರ್ವಜನಿಕ ಸಹಭಾಗಿತ್ವದಲ್ಲಿ ಒಟ್ಟು 242 ಕೋಟಿ ಸಸಿಗಳನ್ನು ನದಿಪಾತ್ರದಲ್ಲಿ ನೆಟ್ಟು ಸಮೃದ್ಧ ಅರಣ್ಯ ಸಂಪತ್ತು ಸೃಷ್ಟಿಸುವ ಮೂಲಕ ಕ್ಷೀಣಿಸುತ್ತಿರುವ ನದಿಯ ಹರಿವಿನ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿ ವರ್ಷಪೂರ್ತಿ ಕಾವೇರಿ ಮೈದಳೆದು ಹರಿಯುವಂತೆ ಮಾಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು.

ಕಾವೇರಿ ಕೂಗು ಅಭಿಯಾನ ಸೆ.3ರಿಂದ ಚಾಲನೆಯಾಗಲಿದೆ. ನದಿ ಪಾತ್ರದಲ್ಲಿ ಬರುವ ರೈತರ ಜಮೀನು ಮತ್ತು ಅರಣ್ಯ ಇಲಾಖೆಗೆ ಸೇರಿದ ಪ್ರದೇಶಗಳಲ್ಲಿ 25 ಕೋಟಿ ಸಸಿಗಳನ್ನು ನೆಡಲು ರಾಜ್ಯ ಸರ್ಕಾರದೊಂದಿಗೆ ಈಶ ಫೌಂಡೇಷನ್‌ ಒಪ್ಪಂದ ಮಾಡಿಕೊಂಡಿದೆ.

ಇದರ ಜೊತೆಗೆ, ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಕೂಡ ಈ ಅಭಿಯಾನದಲ್ಲಿ ಕೈಜೋಡಿಸಬಹುದಾಗಿದೆ. ಸಾರ್ವಜನಿಕರು 42 ರು.ಗಳನ್ನು ನೀಡಿದರೆ ಅವರ ಹೆಸರಲ್ಲಿ ಒಂದು ಸಸಿ ನೆಡಲಾಗುತ್ತದೆ. ಒಬ್ಬರು ಎಷ್ಟುಸಸಿಗಳನ್ನು ಬೇಕಾದರೂ ನೆಡಲು ನೆರವಾಗಬಹುದು. ಆ ಮೂಲಕ ಒಟ್ಟು 242 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದರು.

ರೈತರ ಜಮೀನಿನಲ್ಲಿ ಅರಣ್ಯ ಕೃಷಿಗೆ ಪ್ರೋತ್ಸಾಹ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ. ಮರಗಳನ್ನು ನೆಟ್ಟು ರೈತರು ಇತರೆ ಬೆಳೆಗಳಿಂದ ಪಡೆಯುತ್ತಿದ್ದ ಆದಾಯ ಕಳೆದುಕೊಳ್ಳುವಂತೆ ಮಾಡುವುದಿಲ್ಲ. ಇಲ್ಲಿ ನೆಡುವ ಮರಗಳೆಲ್ಲವೂ ರೈತರ ಲಾಭ ಹೆಚ್ಚಿಸುವಂತವುಗಳಾಗಿರುತ್ತವೆ.

ಈ ಮರಗಳಲ್ಲಿ ಬಿಡುವ ಫಸಲನ್ನು ಬಳಸುವ ಹಾಗೂ ಇಂತಿಷ್ಟುವರ್ಷಗಳ ಬಳಿಕ ಆ ಮರಗಳನ್ನು ಮಾರಿಕೊಳ್ಳಬಹುದಾದ ಹಕ್ಕನ್ನು ರೈತರಿಗೆ ನೀಡಲು ಸರ್ಕಾರ ಅಗತ್ಯ ನೀತಿ ನಿಯಮವನ್ನೂ ರೂಪಿಸಿ ರೈತರಿಗೆ ನೀಡಲಿದೆ ಎಂದರು.

ಆ ಮೂಲಕ ರೈತರ ಆದಾಯ ವೃದ್ಧಿಗೆ ಒಂದು ವಾಣಿಜ್ಯ ಮಾದರಿಯಾಗಿಯೂ ಇದನ್ನು ರೂಪಿಸಲಾಗುತ್ತಿದೆ. ಈಗಾಗಲೇ ತಮಿಳುನಾಡಿನ ಕೆಲವೆಡೆ ಇಂತಹ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ರೈತರು ಹಿಂದೆ ಪಡೆಯುತ್ತಿದ್ದ ಆದಾಯಕ್ಕಿಂತ ಅರಣ್ಯ ಕೃಷಿಯಿಂದ ನಾಲ್ಕಾರು ಪಟ್ಟು ಹೆಚ್ಚು ಆದಾಯ ಪಡೆಯುತ್ತಿದ್ದಾರೆ.

ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಈಗ ಯೋಜನೆ ರೂಪಿಸಲಾಗಿದೆ ಎಂದರು. ಕಾವೇರಿ ಕೂಗು ಅಭಿಯಾನದಲ್ಲಿ ಭಾಗಿಯಾಗಲು ್ಚa್ಠvಛ್ಟಿy್ಚa್ಝ್ಝಜ್ಞಿಜ.ಟ್ಟಜ, 8000980009 ಸಂಪರ್ಕಿಸಬಹುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಕಾವೇರಿ ಕೂಗು ಅಭಿಯಾನದ ಮಂಡಳಿ ಸದಸ್ಯರಾದ ಇಸ್ರೋ ಮಾಜಿ ಅಧ್ಯಕ್ಷರಾದ ಡಾ. ಕೆ. ರಾಧಾಕೃಷ್ಣನ್‌, ಡಾ. ಎ.ಎಸ್‌. ಕಿರಣ್‌ ಕುಮಾರ್‌, ಬಯೋಕಾನ್‌ ಸಂಸ್ಥೆಯ ಕಿರಣ್‌ ಮಜುಂದಾರ್‌ ಶಾ, ಸುಪ್ರೀಂಕೋರ್ಟ್‌ ನಿವೃತ್ತ ನ್ಯಾ. ಅರಿಜಿತ್‌ ಪಸಾಯತ್‌, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ನರಸಿಂಹರಾಜು, ವಿಶ್ವ ವನ್ಯಜೀವಿ ನಿಧಿಯ ಪ್ರಧಾನ ಕಾರ್ಯದರ್ಶಿ ರವಿ ಸಿಂಗ್‌, ರೈತ ಉತ್ಪಾದಕರ ಸಂಸ್ಥೆ(ಎಫ್‌ಪಿಒ) ಸಂಸ್ಥಾಪಕ ಪ್ರವೇಶ್‌ ಶರ್ಮಾ, ಚಿತ್ರನಟಿ ಸುಹಾಸಿನಿ ಮಣಿರತ್ನಂ, ಕಾವೇರಿ ಕೂಗು ಅಭಿಯಾನ ಸಂಯೋಜಕ ಯುರಿ ಜೈನ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನದಿಗಳು ಅಪಾಯದಲ್ಲಿವೆ. ನೀರಿಗೆ ಯುದ್ಧವೇ ಆಗುವ ಸನ್ನಿವೇಶವಿದೆ. ನೀರಿಗಾಗಿ ತಮಿಳುನಾಡು- ಕರ್ನಾಟಕ ಸಾಕಷ್ಟುಜಗಳವಾಡಿವೆ. ಪರಿಸರದ ಜತೆಗೆ ಆರ್ಥಿಕತೆಗೆ ನೇರ ಸಂಬಂಧವಿದೆ ಎಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಇದೀಗ ಎಲ್ಲರ ಗುರಿ ಆಗಬೇಕು.

- ಕಿರಣ್‌ ಮಜುಂದಾರ್‌ ಶಾ, ಬಯೋಕಾನ್‌ ಮುಖ್ಯಸ್ಥೆ