ಗೌರಿ ಲಂಕೇಶ್  ಹತ್ಯೆ ತನಿಖೆ ಕೈಗೊಂಡಿರುವ ಎಸ್'ಐಟಿ ಪೊಲೀಸರು  ನಕ್ಸಲ್​ ನಿಗ್ರಹ ಪಡೆಯ ಅಧಿಕಾರಿಗಳಿಂದ ಮಾಹಿತಿ  ಕೇಳಿದ್ದಾರೆ.

ಬೆಂಗಳೂರು (ಸೆ.07): ಗೌರಿ ಲಂಕೇಶ್ ಹತ್ಯೆ ತನಿಖೆ ಕೈಗೊಂಡಿರುವ ಎಸ್'ಐಟಿ ಪೊಲೀಸರು ನಕ್ಸಲ್​ ನಿಗ್ರಹ ಪಡೆಯ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ.

ನಕ್ಸಲರಿಂದ ಗೌರಿಗೆ ಬೆದರಿಕೆ ಇತ್ತು ಎಂದು ಸಹೋದರ ಇಂದ್ರಜಿತ್ ಲಂಕೇಶ್​ ಹೇಳಿಕೆ ನೀಡಿದ್ದರು. ಇಂದ್ರಜಿತ್​ ಹೇಳಿಕೆ ನಂತರ ಎಸ್'ಐಟಿ ಪೊಲೀಸರು ನಕ್ಸಲ್​ ಮುಖಂಡರು ಮತ್ತು ಗೌರಿ ನಡುವೆ ಭಿನ್ನಾಭಿಪ್ರಾಯಗಳು ಇದ್ದವಾ? ಎಂಬ ಬಗ್ಗೆ ಮಾಹಿತಿ ಕೇಳಿದ್ದಾರೆ.

ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಗೌರಿ ಲಂಕೇಶ್​ ಮಾಡಿದ್ದರು. ಸಿರಿಮನೆ ನಾಗರಾಜ್​, ನೂರ್​ ಜುಲ್ಫೀಕರ್ ಇಬ್ಬರನ್ನು​ ಮುಖ್ಯವಾಹಿನಿಗೆ ಕರೆತರಲಾಗಿತ್ತು. ಇದು ಕೆಲ ನಕ್ಸಲ್​ ಮುಖಂಡರ ಸಿಟ್ಟಿಗೆ ಕಾರಣವಾಗಿತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ. ಮುಖ್ಯವಾಹಿನಿಗೆ ಬಂದ ಇಬ್ಬರನ್ನು ಹೇಡಿಗಳು ಎಂದು ಕೆಲ ನಕ್ಸಲ್​ ಮುಖಂಡರು ಟೀಕಿಸಿದ್ದರು. ನಕ್ಸಲ್​ ಚಳವಳಿ ತೀವ್ರತೆ ಕಳೆದುಕೊಳ್ಳಲು ಗೌರಿ ಕಾರಣ ಎಂಬ ಸಿಟ್ಟು ಕೆಲ ನಕ್ಸಲರಿಗಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ.

ನಕ್ಸಲ್​ ಪರ ಹೋರಾಟಗಾರ್ತಿ ಎಂದು ಗೌರಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದಾರೆ ಎಂಬ ಸಿಟ್ಟು ನಕ್ಸಲರಿಗಿತ್ತು. ಕೆಲ ನಕ್ಸಲರನ್ನು ಬಲವಂತವಾಗಿ ನಕ್ಸಲ್​ ಚಳುವಳಿಯಿಂದ ವಿಮುಖರನ್ನಾಗಿಸಿದ್ದರು ಗೌರಿ ಲಂಕೇಶ್. ಇವರ ಕೆಲ ವಿಚಾರಗಳು ನಕ್ಸಲ್​ ಮುಖಂಡರಿಗೆ ಪಥ್ಯವಾಗುತ್ತಿರಲಿಲ್ಲ. ನಕ್ಸಲರನ್ನು ಶರಣಾಗತಿ ಮಾಡುವ ಮೂಲಕ ಸಿಎಂ ಗೆ ಗೌರಿ ಹತ್ತಿರವಾಗಿದ್ದಾರೆ ಎಂಬ ಆಕ್ರೋಶ ನಕ್ಸಲ್​ ಮುಖಂಡರಿಗಿತ್ತು ಎನ್ನುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.