ನವದೆಹಲಿ[ಆ.02]: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಕಿನಿ ತೊಟ್ಟಿರುವ ಹುಡುಗಿಯ ಫೋಟೋವನ್ನು ತಮ್ಮ ಮೊಬೈಲ್‌ನಲ್ಲಿ ನೋಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋದೊಂದಿಗೆ ‘ಫೋಟೋಗಳು ಎಂದಿಗೂ ಸುಳ್ಳು ಹೇಳಲ್ಲ. ನೋಡಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಏನು ಮಾಡುತ್ತಿದ್ದಾರೆಂದು’ ಎಂಬ ಒಕ್ಕಣೆಯನ್ನು ಬರೆಯಲಾಗಿದೆ. 

ಯೋಗಿ ಸರ್ಕಾರ್ ಎಂಬ ಫೇಸ್‌ಬುಕ್ ಪೇಜ್ ಈ ಪೋಸ್ಟನ್ನು ಮೊದಲಿಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು, 7000 ಬಾರಿ ಶೇರ್ ಆಗಿದೆ. ಬಳಿಕ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್‌ಆ್ಯಪ್, ಟ್ವೀಟರ್'ನಲ್ಲಿ ಈ ಫೋಟೋ ಭಾರೀ ವೈರಲ್ ಆಗಿದೆ. ಆದರೆ ನಿಜಕ್ಕೂ ರಾಹುಲ್ ಗಾಂಧಿ ತುಂಡುಡುಗೆ ತೊಟ್ಟ ಹುಡುಗಿಯ ಫೋಟೋವನ್ನು ನೋಡುತ್ತಿದ್ದರೇ ಎಂದು ಹುಡುಕಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ ಇದೊಂದು ಫೋಟೋಶಾಪ್ ಮಾಡಿದ ಚಿತ್ರ ಎಂಬುದು ಸ್ಪಷ್ಟವಾಗಿದೆ.

ವಾಸ್ತವವಾಗಿ ರಾಹುಲ್ ಗಾಂಧಿ ಮೊಬೈಲನ್ನೇ ಹಿಡಿದಿಲ್ಲ, ಬದಲಾಗಿ ಕೈಯಲ್ಲಿ ಹಣವಿದೆ. 2016 ನವೆಂಬರ್ 8ರಂದು ನೋಟು ಅಮಾನೀಕರಣವಾದ ಬಳಿಕ 2016 ನವೆಂಬರ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನವದೆಹಲಿ ಬ್ಯಾಂಕ್'ವೊಂದಕ್ಕೆ ಭೇಟಿ ನೀಡಿದ ಹಳೆಯ ನೋಟುಗಳನ್ನು ಬದಲಾಯಿಸಿದ್ದರು. ಆ ವೇಳೆ ರಾಹುಲ್ ಗಾಂಧಿ ನೋಟುಗಳನ್ನು ಹಿಡಿದು ನಿಂತಿದ್ದ ಫೋಟೋವನ್ನೇ ಬಳಸಿಕೊಂಡು ರಾಹುಲ್ ಗಾಂಧಿ ಮೊಬೈಲ್ ಹಿಡಿದು ಬಿಕಿನಿ ತೊಟ್ಟಿರುವ ಹುಡುಗಿಯ ಚಿತ್ರ ನೋಡುತ್ತಿರುವಂತೆ ಫೋಟೋಶಾಪ್ ಮೂಲಕ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.