ನವದೆಹಲಿ (ನ. 06): 2019ರ ಲೋಕಸಭಾ ಚುನಾವಣೆಯಲ್ಲಿ ಒಂದು ಕಡೆ ರಾಹುಲ್ ಗಾಂಧಿ ಅವರು ಮೋದಿ ವಿರುದ್ಧ ರಫೇಲ್‌ ಯುದ್ಧವಿಮಾನ ಖರೀದಿಯನ್ನು ಹಗರಣವಾಗಿ ತೋರಿಸಲು ಶತಪ್ರಯತ್ನ ಮಾಡುತ್ತಿದ್ದರೆ ಇನ್ನೊಂದು ಕಡೆ ಅಚ್ಛೇ ದಿನ್‌ ಮತ್ತು ಸಬ್‌ ಕಾ ವಿಕಾಸ್‌ ಅಷ್ಟೇ ಸಾಕಾಗೋದಿಲ್ಲ ಎಂದು ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರು ಚುನಾವಣೆಗೆ ಸರಿಯಾಗಿ ಮತ್ತೊಮ್ಮೆ ಶ್ರೀರಾಮಚಂದ್ರನ ಜಪ ಆರಂಭಿಸಿವೆ.

ಮಾಧ್ಯಮಗಳ ಎದುರು ಬರಲು ಹಿಂಜರಿಯುತ್ತಿದ್ದ ರಾಹುಲ್  ಈಗ ದಿನವೂ ತಾನೇ ಪತ್ರಿಕಾಗೋಷ್ಠಿ ನಡೆಸಿ ರಫೇಲ್‌ ವಿಚಾರದಲ್ಲಿ ಅಂಬಾನಿ ಮತ್ತು ಮೋದಿಯನ್ನು ಹೇಗಾದರೂ ಜೊತೆಗೆ ತಂದಿಡಲು ಹೆಣಗಾಡುತ್ತಿದ್ದಾರೆ. ಮೊದಮೊದಲಿಗೆ ರಫೇಲ್‌ ವಿಷಯದಲ್ಲಿ ಜನರು ಅಷ್ಟೊಂದು ಆಸಕ್ತಿ ತೋರಲಿಲ್ಲವಾದರೂ ರಾಹುಲ… ಪದೇ ಪದೇ ಮಾತನಾಡುತ್ತಿರುವುದರಿಂದ ಕೆಲ ಮಾಧ್ಯಮಗಳು ವಿಷಯವನ್ನು ಕೆದಕಲು ಶುರುಮಾಡಿವೆ. ಇನ್ನು ಸುಪ್ರೀಂಕೋರ್ಟ್‌ನಲ್ಲಿ ಕೂಡ ಏನಾದರೂ ಆದರೆ ರಾಹುಲ… ಗಾಂಧಿಯವರ ಒಣರೊಟ್ಟಿಗೆ ಸ್ವಲ್ಪ ತುಪ್ಪ ಪ್ರಾಪ್ತಿ ಆದರೂ ಆಶ್ಚರ್ಯವಿಲ್ಲ.

ಇನ್ನು ರಫೇಲ್‌ ಮತ್ತು ಸಿಬಿಐ ಜಗಳ ಸ್ವಲ್ಪ ಸರ್ಕಾರದ ಇಮೇಜ್‌ ಬಗ್ಗೆಯೂ ಪ್ರಶ್ನೆ ಹುಟ್ಟುಹಾಕಿದೆ. ಅದರ ಜೊತೆಗೆ ಮಹಾಗಠಬಂಧನ್‌ ಮತ್ತು ರಾಜ್ಯ ಸರ್ಕಾರಗಳ ಆಡಳಿತ ವಿರೋಧಿ ಅಲೆಗೆ ರಾಮಬಾಣ ಒಂದೇ ಸೂಕ್ತ ಎಂದು ಅರಿತಿರುವ ಸಂಘ ಪರಿವಾರ ಅಯೋಧ್ಯೆಯನ್ನು ಮತ್ತೊಮ್ಮೆ ಸೆಂಟರ್‌ ಸ್ಟೇಜ್‌ಗೆ ತರಲು ಶುರುಮಾಡಿದ್ದು, ರಾಮ ವರ್ಸಸ್‌ ರಫೇಲ್‌ ಸಮರ ದಿನದಿಂದ ದಿನಕ್ಕೆ ರಂಗೇರಿಸಲಿದೆ.

ರಾಮಮಂದಿರದ ವಿಷಯದಲ್ಲಿ ಆರ್‌ಎಸ್‌ಎಸ್‌ ಮತ್ತು ವಿಎಚ್‌ಪಿ ನೇರವಾಗಿ ಸುಪ್ರೀಂಕೋರ್ಟನ್ನೇ ಟಾರ್ಗೆಟ್‌ ಮಾಡುತ್ತಿರುವಂತಿದೆ. ಆದರೆ, ಸರ್ಕಾರ ಈ ವಿಷಯದಲ್ಲಿ ಎಷ್ಟುಮುಂದೆ ಹೋಗಬೇಕು ಎಂದು ನಿರ್ಧಾರ ಆಗಿಲ್ಲ. ಮೋದಿ ಮತ್ತು ಅಮಿತ್‌ ಶಾ ಮನಸ್ಸಿನಲ್ಲಿ ಏನಿದೆ ಎನ್ನುವುದು ಮೋಹನ್‌ ಭಾಗವತ್‌ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಈಗ ಕೇಳಿಬರುತ್ತಿರುವ ಪ್ರಕಾರ ಒಂದು ವೇಳೆ ಮಧ್ಯಪ್ರದೇಶದಲ್ಲಿ ಫಲಿತಾಂಶ ಹೆಚ್ಚುಕಡಿಮೆ ಆದರೆ ಮಾತ್ರ ಸರ್ಕಾರದ ಕಡೆಯಿಂದ ಮಂದಿರದ ವಿಷಯದಲ್ಲಿ ಮುಂದೆ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ.

ಬಹಿರಂಗವಾಗಿ ಆರ್‌ಎಸ್‌ಎಸ್‌ ರಾಮಮಂದಿರ ವಿಷಯದಲ್ಲಿ ಸುಗ್ರೀವಾಜ್ಞೆ ತರಲು ಹೇಳುತ್ತಿದೆಯಾದರೂ ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಅದನ್ನು ಮಾಡಲು ಹೋದರೆ ಆಗುವ ವಿಪರೀತ ಪರಿಣಾಮಗಳ ಬಗ್ಗೆ ಕೂಡ ಮೊನ್ನೆ ಭಾಗವತ್‌ ಮತ್ತು ಅಮಿತ್‌ ಶಾ ನಡುವೆ ಚರ್ಚೆ ನಡೆದಿದೆ. ಬಿಜೆಪಿಯ ಚುನಾವಣಾ ರಣತಂತ್ರಗಾರರ ಪ್ರಕಾರ 2019ರಲ್ಲಿ ಸ್ವಂತ ಬಲದ ಮೇಲೆ 250 ಕ್ರಾಸ್‌ ಮಾಡಲು ಮೋದಿ ಇಮೇಜ್‌ ಜೊತೆಗೆ ಒಂದು ದೊಡ್ಡ ವಿಷಯ ಬೇಕೇ ಬೇಕು. ಅದು ರಾಮಮಂದಿರ ಹೌದಾದರೂ ಅದರಿಂದ ಆಗುವ ಸಾಧಕ ಬಾಧಕಗಳ ಬಗ್ಗೆ ಕೂಡ ಮೋದಿ ಲೆಕ್ಕಾಚಾರ ಹಾಕಿ ಹೆಜ್ಜೆ ಇಡುವಂತೆ ಕಾಣುತ್ತಿದೆ.

1989ರಲ್ಲಿ ರಾಮ V/S ಬೋಫೋರ್ಸ್‌

2019 ರಲ್ಲಿ ರಾಮ ಮತ್ತು ರಫೇಲ್‌ ಅಸ್ತ್ರಗಳು ಯುದ್ಧದಲ್ಲಿ ಎದುರು ಬದರು ಬಳಕೆ ಆಗುತ್ತಿದ್ದರೆ ಸರಿಯಾಗಿ 30 ವರ್ಷದ ಹಿಂದೆ 1989ರಲ್ಲಿ ಇದೇ ಬಿಜೆಪಿ ರಾಜೀವ್‌ ಗಾಂಧಿ ವಿರುದ್ಧ ಒಂದು ಕಡೆ ಬೋಫೋರ್ಸ್‌, ಮತ್ತೊಂದು ಕಡೆ ರಾಮನನ್ನು ಅಸ್ತ್ರಗಳಾಗಿ ಉಪಯೋಗಿಸಿ ಕಾಂಗ್ರೆಸ್‌ ಸರ್ಕಾರವನ್ನು ಮನೆಗೆ ಕಳಿಸಿತ್ತು.

ಗಮನಿಸಬೇಕಾದ ಅಂಶ ಎಂದರೆ ಆಗ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ ಇಲ್ಲಿಯವರೆಗೆ ಒಮ್ಮೆಯೂ ಸ್ವಂತ ಬಹುಮತದ ಮೇಲೆ ಅಧಿಕಾರ ಗಳಿಸಲು ಸಾಧ್ಯವಾಗಿಲ್ಲ. ಆದರೆ ಈಗ ರಾಜೀವ್‌ ಪುತ್ರ ರಾಹುಲ್ ಸ್ವಂತ ಬಲದ ಮೇಲೆ ಸರ್ಕಾರ ರಚಿಸಿರುವ ಮೋದಿ ವಿರುದ್ಧ ರಫೇಲ್‌ ಬಾಣ ಬಿಡುತ್ತಿದ್ದು, ಇದಕ್ಕೆ ರಾಮನೇ ಉತ್ತರ ಹೌದೋ ಎಂದು ಬಿಜೆಪಿ ತಲೆಕೆಡಿಸಿಕೊಂಡಿದೆ. ಯಾವುದೋ ಒಂದು ರೂಪದಲ್ಲಿ ಇತಿಹಾಸ ಮರುಕಳಿಸುತ್ತದೆ ನೋಡಿ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ