Asianet Suvarna News Asianet Suvarna News

ಮುಖ್ಯಮಂತ್ರಿಯಾಗಿರಲು ಜಯಲಲಿತಾ ಶಕ್ತರೇ?

ಸಚಿವ ಸಂಪುಟದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲು ಸ್ವತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳಲು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಜಯಲಲಿತಾರಿಗೆ ಇದೆಯೇ ಎಂಬ ಪ್ರಶ್ನೆ ಪ್ರಮುಖವಾದುದು.

Is Jayalalitha fit to continue as cm

ಬೆಂಗಳೂರು(ಅ.29): ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿದ್ದಾರೆಯೇ ಎಂಬ ಕುರಿತು ಅನುಮಾನಗಳಿವೆ. ಈ ಕುರಿತು ಸಾರ್ವಜನಿಕರಿಗೂ ತಿಳಿದುಕೊಳ್ಳುವ ಹಕ್ಕಿದೆ. ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಬೇಡಿಕೆ ಇಲ್ಲದ ಕಾರಣ ಹಾಗೂ ಆಡಳಿತ ಯಂತ್ರ ಸುಸೂತ್ರವಾಗಿ ನಡೆಯುತ್ತಿರುವುದರಿಂದ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಈಗ ಉದ್ಭವಿಸದು. ಕಾದು ನೋಡೋಣ.

ಈ ಅಭಿಪ್ರಾಯಗಳು ವ್ಯಕ್ತವಾದದ್ದು ಜಕ್ಕೂರಿನಲ್ಲಿರುವ ನ್ಯಾಷನಲ್ ಸ್ಕೂಲ್ ಆಫ್ ಜರ್ನಲಿಸಂನಲ್ಲಿ. ಜಯಲಲಿತಾ ಅನಾರೋಗ್ಯ; ನಾಟಕೀಯ ಬೆಳವಣಿಗೆ-ಆತಂಕಗಳ ಹಿನ್ನೆಲೆಯಲ್ಲಿ ‘ಖಾಸಗಿತನ ಮತ್ತು ಮಾಹಿತಿ ಹಕ್ಕು’ ಕುರಿತು ವಿಚಾರಸಂಕಿರಣ ನಡೆಯಿತು.

ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಮಾತನಾಡಿ, ಸಚಿವ ಸಂಪುಟದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲು ಸ್ವತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳಲು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಜಯಲಲಿತಾರಿಗೆ ಇದೆಯೇ ಎಂಬ ಪ್ರಶ್ನೆ ಪ್ರಮುಖವಾದುದು.

ಆರೋಗ್ಯ ವಿಚಾರಗಳು ಅವರ ಅನಾರೋಗ್ಯದ ವಿವರಗಳು ಖಾಸಗಿ ಆಗಿದ್ದರೂ ಅವರು ಸಾರ್ವಜನಿಕ ಬದುಕಿನಲ್ಲಿರುವುದು ಮಾತ್ರವಲ್ಲ ರಾಜ್ಯವೊಂದರ ಮುಖ್ಯಮಂತ್ರಿಯಾಗಿ ಆಡಳಿತ ನಿರ್ವಹಿಸುತ್ತಿರುವುದರಿಂದಲೂ ಈ ವಿಚಾರವನ್ನು ಸಾರ್ವಜನಿಕರೂ ತಿಳಿಯಬೇಕಿದೆ. ಪ್ರತಿಪಕ್ಷಗಳೂ ಸೇರಿದಂತೆ ಎಲ್ಲ ಪಕ್ಷಗಳೂ ಪ್ರಶ್ನಿಸಬಹುದಾಗಿದೆ. ಸಾರ್ವಜನಿಕರು ತಮ್ಮ ಮುಖ್ಯಮಂತ್ರಿ ಎಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲ ಶಕ್ತಿ ಹೊಂದಿದ್ದಾರೆಂಬುದನ್ನು ಅರಿತುಕೊಳ್ಳುವ ಹಕ್ಕು ಹೊಂದಿದ್ದಾರೆ ಎಂದರು.

ಜಯಲಲಿತಾ ಕುರಿತಾದ ಆಸ್ಪತ್ರೆ ಬುಲೆಟಿನ್‌ಗಳು ಅವರು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದಾರೆ ಎನ್ನುತ್ತದೆ. ರಾಜ್ಯಪಾಲರೂ ಭೇಟಿ ನೀಡುತ್ತಾರೆ. ಆದರೆ ರಾಜ್ಯಪಾಲರು ಜಯಲಲಿತಾರೊಂದಿಗೆ ಮಾತನಾಡಿದರೆ, ಜಯಲಲಿತಾ ಮಾತನಾಡುವ ಸ್ಥಿತಿಯಲ್ಲಿದ್ದರೇ ಎಂಬುದನ್ನು ಅವರು ಹೇಳುತ್ತಿಲ್ಲ. ಜಯಲಲಿತಾ ಆರೋಗ್ಯದಿಂದಿದ್ದಾರೆಂದು ಯಾವ ಆಧಾರದಲ್ಲಿ ಹೇಳಲಾಗುತ್ತಿದೆ ಎಂದು ಪ್ರಶ್ನಿಸಿದರು. ಜಯಲಲಿತಾ ಸಿಎಂ ಆಗಿರುವಾಗ ಪನೀರ್ ಸೆಲ್ವಂಗೆ ಕಾನೂನಾತ್ಮಕವಾಗಿ ಯಾವ ಅಕಾರವೂ ಇರುವುದಿಲ್ಲ. ನಿರ್ಧಾರಗಳನ್ನು ಕೈಗೊಳ್ಳಲು ಬರುವುದಿಲ್ಲ. ಅನೇಕ ಮಹತ್ವದ ಆಡಳಿತಾತ್ಮಕ ವಿಚಾರಗಳನ್ನು ಸಿಎಂ ನಿರ್ಧರಿಸಬೇಕಾಗುತ್ತದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕೆಲವರು ಆರೋಗ್ಯವೂ ಸೇರಿದಂತೆ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಗೌಪ್ಯವಾಗಿಟ್ಟಿರುತ್ತಾರೆ. ಆದರೆ ಕೆಲವರು ತಮ್ಮ ಮಾಹಿತಿಗಳು ಬಹಿರಂಗವಾದರೂ ತಲೆಕೆಡಿಸಿಕೊಳ್ಳುವುದಿಲ್ಲ. ಜಯಲಲಿತಾ ಅವರು ಸಿಎಂ ಆಗಿರುವುದರಿಂದ ಕೆಲವೊಂದು ಮಾಹಿತಿಗಳನ್ನು ನೀಡಬೇಕಿದೆ. ಆದರೆ ಎಲ್ಲವೂ ಅಲ್ಲ. ಜತೆಗೆ ಈಗ ತಮಿಳುನಾಡಿನಲ್ಲಿ ಜಯಲಲಿತಾರ ಬದಲಾವಣೆಗೆ ಯಾರೊಬ್ಬರೂ ಆಗ್ರಹಿಸುತ್ತಿಲ್ಲ. ಯಾರೊಬ್ಬ ಶಾಸಕರೂ ಈ ಕುರಿತು ದನಿ ಎತ್ತಿಲ್ಲ. ಅತಂತ್ರ ಪರಿಸ್ಥಿತಿ, ಅಸ್ಥಿರತೆ ಉಂಟಾಗಿಲ್ಲ. ಹೀಗಿರುವಾಗ ಸಿಎಂ ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ. ಆಸ್ಪತ್ರೆ ನೀಡುವ ಮಾಹಿತಿಯನ್ನು ನಂಬಬೇಕಿದೆ. ಖಾಸಗಿತನದ ಹಕ್ಕು ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಅವರ ನಿಲುವುಗಳನ್ನು ಅವಲಂಭಿಸಿರುತ್ತವೆ ಎಂದು ಹೇಳಿದರು.

ನ್ಯಾಯವಾದಿ ಕರಣ್ ಜೋಸ್ಫ್, ತಮಿಳುನಾಡು ಸಿಎಂ ಕುರಿತು ಏನು ನಡೆಯುತ್ತಿದೆ ಎಂಬ ಮಾಹಿತಿ ಅರಿಯುವ ಹಕ್ಕು ಇದೆ. ಆದರೆ ಇಲ್ಲಿ ಸರ್ಕಾರಿ ಯಂತ್ರ ಕುಸಿದು ಬಿದ್ದಿಲ್ಲ. ಸಚಿವ ಸಂಪುಟದ ಜವಾಬ್ದಾರಿ ವಹಿಸಲಾಗಿದೆ. ಆದರೆ ಖಾಸಗಿತನದ ಹಕ್ಕು ಮೂಲಭೂತ ಹಕ್ಕೇ ಎಂಬ ಕುರಿತು ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಐವರು ನ್ಯಾಯಮೂರ್ತಿಗಳ ಪೀಠ ಸದ್ಯದಲ್ಲೇ ಈ ವಿಚಾರದಲ್ಲಿ ತೀರ್ಪು ನೀಡಬಹುದು. ಆದರೆ ಜಯಲಲಿತಾರ ಚಿಕಿತ್ಸಾ ವೆಚ್ಚ ಯಾರು ಭರಿಸುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಬಳಕೆ ಆಗುತ್ತಿದೆಯೇ ಎಂಬುದನ್ನು ಪ್ರಶ್ನೆ ಮಾಡಬಹುದಾಗಿದೆ ಎಂದರು.

ನ್ಯಾಷನಲ್ ಸ್ಕೂಲ್ ಆ್ ಜರ್ನಲಿಸಂನ ನಿರ್ದೇಶಕ ಎಚ್.ಎಸ್.ಬಲರಾಂ ಉಪಸ್ಥಿತರಿದ್ದರು.

ವೀರೇಂದ್ರಪಾಟೀಲ್ ಬದಲಾವಣೆಗೆ ಪಕ್ಷ ಬಯಸಿತ್ತು...

ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರಪಾಟೀಲ್ ಆರೋಗ್ಯ ಕೂಡಾ ಹದಗೆಟ್ಟಾಗ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಲಾಗಿತ್ತು. ಆದರೆ ಇಲ್ಲಿ ಜಯಲಲಿತಾ ಪರಿಸ್ಥಿತಿ ಇರಲಿಲ್ಲ. ವೀರೇಂದ್ರಪಾಟೀಲ್ ಬದಲಾವಣೆಗೆ ಪಕ್ಷ ಬಯಸಿತ್ತು. ಶಾಸಕರ ಬಣವೂ ಬೇಡಿಕೆ ಇಟ್ಟಿತ್ತು. ಆದರೆ ವೀರೇಂದ್ರಪಾಟೀಲ್ ಬದಲಾವಣೆ ವಿವಾದಕ್ಕೂ ಕಾರಣವಾಗಿತ್ತು ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಗುಂಡೂರಾವ್ ಹೇಳಿದರು.

Follow Us:
Download App:
  • android
  • ios