ಕೇಂದ್ರ ಹಾಗೂ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಈ ಹೊತ್ತಿನಲ್ಲೇ ದೇಶದ ಮೂಲೆ ಮೂಲೆಯ ಸಾಧು-ಸಂತರು ಸೇರಿರುವುದು ರಾಮಮಂದಿರದ ವಿಚಾರದಲ್ಲಿ ಧರ್ಮ ಸಂಸದ್‌'ನ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ಉಡುಪಿ(ನ.24): ಇಡೀ ದೇಶವೇ ಕುತೂಹಲದ ಕಣ್ಣುಗಳಿಂದ ನೋಡುತ್ತಿರುವ ‘ಹಿಂದೂ ಧರ್ಮ ಸಂಸದ್’ಗೆ ಉಡುಪಿಯಲ್ಲಿಂದು ಚಾಲನೆ ಸಿಗಲಿದೆ.

ಮೂರು ದಶಕಗಳ ಬಳಿಕ ಇಲ್ಲಿ ನಡೆಯುತ್ತಿರುವ ಈ ಮೂರು ದಿನಗಳ ಸಮ್ಮೇಳನದಲ್ಲಿ ರಾಮಮಂದಿರ ನಿರ್ಮಾಣ ವಿಚಾರವೇ ಪ್ರಮುಖವಾಗಿ ಚರ್ಚೆಗೆ ಬರುವ ನಿರೀಕ್ಷೆಯಿದೆ. ಕೇಂದ್ರ ಹಾಗೂ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಈ ಹೊತ್ತಿನಲ್ಲೇ ದೇಶದ ಮೂಲೆ ಮೂಲೆಯ ಸಾಧು-ಸಂತರು ಸೇರಿರುವುದು ರಾಮಮಂದಿರದ ವಿಚಾರದಲ್ಲಿ ಧರ್ಮ ಸಂಸದ್‌'ನ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಇದಕ್ಕೆ ಪೂರಕವಾಗಿ ಸಮ್ಮೇಳನದ ಮೊದಲ ದಿನದ ಗೋಷ್ಠಿಯಲ್ಲೇ ರಾಮಮಂದಿರ ವಿಚಾರ ಚರ್ಚೆಗೆ ಬರುತ್ತಲಿರುವುದು, ಜತೆಗೆ ವಿಶ್ವಹಿಂದೂ ಪರಿಷತ್‌'ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಕೂಡ ರಾಮಜನ್ಮಭೂಮಿ ಸಮಸ್ಯೆಯನ್ನು ಪ್ರಮುಖವಾಗಿ ಚರ್ಚಿಸುವ ಸುಳಿವು ನೀಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ನಡುವೆ, ವಿಹಂಪದ ಮಾರ್ಗದರ್ಶಕರೂ ಆಗಿರುವ ಪೇಜಾವರ ಶ್ರೀಗಳೂ ಇದೇ ಧಾಟಿಯಲ್ಲಿ ಮಾತನ್ನಾಡಿದ್ದಾರೆ. ರಾಮಮಂದಿರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ವಿಶೇಷ ವಿಧೆಯಕ ರಚಿಸಬೇಕೆನ್ನುವ ಚಿಂತನೆಯನ್ನು ಸಾಧು-ಸಂತರ ಮುಂದಿಡುವುದಾಗಿ ತಿಳಿಸಿದ್ದಾರೆ.

ಗೋಸಂರಕ್ಷಣೆ ಕುರಿತೂ ಚರ್ಚೆ: ಈ ಮೂರು ದಿನಗಳ ಧರ್ಮ ಸಂಸದ್‌'ನಲ್ಲಿ ರಾಮಮಂದಿರವಲ್ಲದೆ ಗೋಸಂರಕ್ಷಣೆ, ಮತಾಂತರ, ಅಸ್ಪಶ್ಯತೆ, ಸಾಮಾಜಿಕ ಸುಧಾರಣೆಯಂಥ ಮಹತ್ವದ ವಿಚಾರಗಳೂ ಚರ್ಚೆಗೆ ಬರಲಿವೆ. ಮೊದಲ ದಿನವಾದ ಇಂದು ಸಂಜೆ 3.30ರಿಂದ 6 ಗಂಟೆವರೆಗೆ ಮಹತ್ವದ ಸಭಾ ಗೋಷ್ಠಿ ನಡೆಯಲಿದ್ದು, ಇದರಲ್ಲಿ ರಾಮಮಂದಿರ ನಿರ್ಮಾಣ, ಗೋಸಂರಕ್ಷಣೆ, ಗೋಸಂವರ್ಧನೆ ಯೋಜನೆಗಳ ಬಗ್ಗೆ ಸಾಧು, ಸಂತರು ಚರ್ಚಿಸಲಿದ್ದಾರೆ. ಎರಡನೇ ದಿನ ಶನಿವಾರ ಬೆಳಗ್ಗೆ 10ರಿಂದ 12.30ರವರೆಗೆ ವಿವಿಧ ಗುಂಪುಗಳಲ್ಲಿ ಗೋಷ್ಠಿ ನಡೆಯಲಿದೆ. ಸಾಮಾಜಿಕ ಸಾಮರಸ್ಯ ನಿರ್ಮಾಣಕ್ಕೆ ಮಾಡಬೇಕಾದ ಪ್ರಯತ್ನಗಳು ವಿಚಾರದಲ್ಲಿ ಸಾಧು, ಸಂತರು ಅಭಿಪ್ರಾಯ ಮಂಡಿಸಲಿದ್ದಾರೆ. ಸಂಜೆ 3.30ರಿಂದ 6 ಗಂಟೆವರೆಗೆ ಮತಾಂತರ ತಡೆ ಹಾಗೂ ಪರಾವರ್ತನದ ಪ್ರಯತ್ನಗಳು, ನಮ್ಮ ಸಂಸ್ಕೃತಿಯ ರಕ್ಷಣೆಗೆ ಯೋಜನೆ ಬಗ್ಗೆ ಅಭಿಪ್ರಾಯ ಮಂಡನೆ ನಡೆಯಲಿದೆ.

ಸಂತರ ದಂಡು: ಧರ್ಮಸಂಸದ್‌'ನಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ಕಡೆಗಳಿಂದ 2000ಕ್ಕೂ ಅಧಿಕ ಸಾಧು, ಸಂತರು ಗುರುವಾರದಿಂದಲೇ ಆಗಮಿಸುತ್ತಿದ್ದಾರೆ. ಮುಖ್ಯವಾಗಿ ಈ ಸಾಧು ಸಂತರಿಗೆ ಉಡುಪಿಯ ಮನೆಮನೆಗಳಲ್ಲಿ, ವಸತಿಗೃಹ ಹಾಗೂ ಛತ್ರಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

26ರಂದು ಧರ್ಮಸಂಸದ್ ನಿರ್ಣಯ ಮಂಡನೆ: ಕೊನೆಯ ದಿನವಾದ 26ರಂದು ಬೆಳಗ್ಗೆ 10ರಿಂದ 12.30ರವರೆಗೆ ಧರ್ಮಸಂಸದ್‌'ನ ನಿರ್ಣಯ ಮಂಡನೆ ನಡೆಯಲಿದೆ. ಸಂಜೆ 4 ಗಂಟೆಗೆ ಬೃಹತ್ ಹಿಂದು ಸಮಾಜೋತ್ಸವ ಏರ್ಪಡಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಈ ವೇಳೆ ಧರ್ಮ ಸಂಸದ್‌'ನ ಪಕ್ಷಿನೋಟ ಮುಂದಿಡಲಿದ್ದಾರೆ. ಗೋರಕ್ಷ ಪೀಠದ ಪೀಠಾಧ್ಯಕ್ಷ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪೇಜಾವರ ಶ್ರೀ ಅಧ್ಯಕ್ಷತೆ ವಹಿಸಲಿದ್ದಾರೆ. 26ರಂದು ಬೆಳಗ್ಗೆ 10ರಿಂದ 1 ಗಂಟೆವರೆಗೆ ಕೃಷ್ಣ ಮಠದ ರಾಜಾಂಗಣದಲ್ಲಿ ಎಲ್ಲ ಜಿಲ್ಲೆಗಳ, ವಿವಿಧ ಸಮಾಜಗಳ ಮುಖಂಡರ ಸಮಾವೇಶ ನಡೆಯಲಿದೆ.