ಬೆಂಗಳೂರು :  ಮಣಿಪುರದಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್ ಎಸ್‌ಪಿಐ) ರದ್ದು ಮಾಡಬೇಕು ಎಂದು ಆಗ್ರಹಿಸಿ  16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದ ಐರೋಮ್ ಶರ್ಮಿಳಾ (47) ಅವರು ಬೆಂಗಳೂರಿನಲ್ಲಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ.

ವಿಶ್ವ ತಾಯಂದಿರ ದಿನವಾದ ಭಾನುವಾರದಂದೇ ಅವರು ಬೆಂಗಳೂರಿನಲ್ಲಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿರುವುದು ವಿಶೇಷ. ನಗರದ ಮಲ್ಲೇಶ್ವರದಲ್ಲಿರುವ ಕ್ಲೌಡ್‌ನೈನ್ ಆಸ್ಪತ್ರೆಗೆ ಶನಿವಾರ ಐರೋಮ್ ಶರ್ಮಿಳಾ ದಾಖಲಾಗಿದ್ದರು.

ಭಾನುವಾರ ಬೆಳಗ್ಗೆ 9.21ಕ್ಕೆ ಅವಳಿ ಹೆಣ್ಣುಮಕ್ಕಳಿಗೆ ಅವರು ಜನ್ಮ ನೀಡಿದರು. ಒಂದು ಮಗು 2.4 ಕೆ.ಜಿ.  ಇದ್ದು, ಮತ್ತೊಂದು 2.6 ಕೆ.ಜಿ. ಇದೆ. ಪ್ರಸ್ತುತ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

‘ಉಕ್ಕಿನ ಮಹಿಳೆ’ ಎಂದೇ ಖ್ಯಾತರಾದ ಐರೋಮ್ ಶರ್ಮಿಳಾ ಅವರು ಕಳೆದ ಒಂದು ವರ್ಷದಿಂದ ಕ್ಲೌಡ್‌ನೈನ್ ಆಸ್ಪತ್ರೆ ವೈದ್ಯೆ ಡಾ.ಶ್ರೀಪ್ರದಾ ವಿನೇಕರ್ ಅವರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸತತ 16 ವರ್ಷಗಳ ಉಪವಾಸದ ಹಿನ್ನೆಲೆಯಲ್ಲಿ ಅವರು ಸ್ವಲ್ಪ ನಿಶ್ಶಕ್ತರಾಗಿದ್ದರು. ಈಗ ಅವರ ಆರೋಗ್ಯ ಉತ್ತಮವಾಗಿದೆ. ಪ್ರಸ್ತುತ ಅವರ ಪತಿ ಬ್ರಿಟಿಷ್ ಪ್ರಜೆ ಡೆಸ್ಮಂಡ್ ಕುಟಿನ್ಹೋ ಮತ್ತು ಸ್ನೇಹಿತರೊಬ್ಬರು ತಾಯಿ ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.