Asianet Suvarna News Asianet Suvarna News

ಕ್ರೆಡಿಟ್ ಕಾರ್ಡ್ ಬಳಕೆಗೆ ಇರಾನ್ ಸಜ್ಜು

Iran Introduces Credit Cards For First Time

ಟೆಹರಾನ್‌(ಸೆ.26): ಕ್ರೆಡಿಟ್‌ ಕಾರ್ಡ್‌ ನೀಡದೆ ಇರುವಂಥ ದೇಶ ಇದೆಯೇ? ಎಂಥ ಪ್ರಶ್ನೆ ಸ್ವಾಮಿ ಇದು? ಪ್ಲಾಸ್ಟಿಕ್‌ ಹಣ ವ್ಯಾಪಕವಾಗಿರುವ ವೇಳೆ ಇಂಥ ಪ್ರಶ್ನೆ ಸಹಜವೇ ಎಂದುಕೊಳ್ಳಬಹುದು. ಆದರೆ ಇರಾನ್‌ನಲ್ಲಿ ಇದುವರೆಗೆ ಕ್ರೆಡಿಟ್‌ ಕಾರ್ಡ್‌ಗಳನ್ನು ನೀಡಲಾಗಿಯೇ ಇಲ್ಲವಂತೆ. ಇದೀಗ ಬದಲಾಗಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಅಲ್ಲಿನ ಸೆಂಟ್ರಲ್‌ ಬ್ಯಾಂಕ್‌ ಈ ಬಗ್ಗೆ ನಿರ್ಧಾರ ಬದಲು ಮಾಡಿದ್ದು, ಬ್ಯಾಂಕ್‌ಗಳಿಗೆ ಅವುಗಳನ್ನು ನೀಡಲು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ. ಈ ಬಗ್ಗೆ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ‘ಡೋನ್ಯಾ-ಎ-ಇಕಿಸ್ತಾದ್‌’ ಪತ್ರಿಕೆ ವರದಿ ಮಾಡಿದೆ.

ಗಮನಾರ್ಹ ಅಂಶವೆಂದರೆ ಈ ಕ್ರೆಡಿಟ್‌ ಕಾರ್ಡ್‌ಗಳು ಕೇವಲ ಆಂತರಿಕ ಗ್ರಾಹಕರ ಉಪಯೋಗಕ್ಕಾಗಿ ಮಾತ್ರ ವಿತರಣೆ ಮಾಡಲಾಗುತ್ತಿದ್ದು, ಯಾವುದೇ ಅಂತಾರಾಷ್ಟ್ರೀಯ ಕ್ರೆಡಿಟ್‌ ಕಾರ್ಡ್‌ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿವೆ. ಕ್ರೆಡಿಟ್‌ ಕಾರ್ಡ್‌ನಲ್ಲಿ ಪಡೆಯಬಹುದಾದ ಸಾಲ ಮತ್ತು ಶುಲ್ಕವನ್ನು ಇರಾನ್‌ ಸೆಂಟ್ರಲ್‌ ಬ್ಯಾಂಕ್‌ ನಿರ್ಧಾರ ಮಾಡುತ್ತದೆ ಎಂದು ಅಲ್ಲಿನ ಸರ್ಕಾರದ ಮೂಲಗಳು ತಿಳಿಸಿವೆ. ಕ್ರೆಡಿಟ್‌ ಲಿಮಿಟ್‌ ಅಮೌಂಟ್‌ನ್ನು ಮೂರು ರೀತಿಯಾಗಿ ವಿಂಗಡಿಸಲಾಗಿದ್ದು, .9 ಲಕ್ಷದವರೆಗೂ ಕ್ರೆಡಿಟ್‌ ಮಾಡಬಹುದಾದ ಸೌಲಭ್ಯ ನೀಡಲಾಗಿದೆ. ಒಂದು ತಿಂಗಳೊಳಗಾಗಿ ಕ್ರೆಡಿಟ್‌ ಕಾರ್ಡ್‌ ಹಣ ಕಟ್ಟದಿದ್ದರೆ, ಶೇ.18ರಷ್ಟುಶುಲ್ಕ ವಿಧಿಸಲಾಗುತ್ತದೆ ಎಂದು ಬ್ಯಾಂಕ್‌ಗಳು ತಿಳಿಸಿವೆ. ಇಷ್ಟುದಿನಗಳ ಕಾಲ ಇರಾನಿಯನ್‌ ಬ್ಯಾಂಕ್‌ಗಳು ಗ್ರಾಹಕರಿಗೆ ಕೇವಲ ಡೆಬಿಟ್‌ ಮತ್ತು ಪ್ರೀಪೇಡ್‌ ಕಾರ್ಡ್‌ಗಳನ್ನು ಮಾತ್ರ ವಿತರಣೆ ಮಾಡುತ್ತಿದ್ದವು.