ಕೊಲ್ಲಂ[ಜು.19]: ಕೇರಳದ ಡಿಸಿಪಿ ಮೇರಿನ್ ಜೋಸೆಫ್ ಕಷ್ಟ ಸಾಧ್ಯವಾಗಿದ್ದ ಪ್ರಕರಣವೊಂದನ್ನು ಭೇದಿಸಿ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 13 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಸೌದಿಗೆ ಪರಾರಿಯಾಗಿದ್ದ ಆರೋಪಿಯನ್ನು ವಿದೇಶಕ್ಕೆ ತೆರಳಿ ಬಂಧಿಸಿ ಕರೆ ತಂದು ಜೈಲಿಗಟ್ಟಿದ್ದಾರೆ. ಈ ಮೂಲಕ ಅಪರಾಧವೆಸಗಿದರು ಎಲ್ಲೇ ಅಡಗಿದ್ದರೂ ಕಾನೂನಿನ ಮುಂದೆ ತಲೆಬಾಗಲೇಬೇಕು ಎಂಬುವುದನ್ನು ಸಾರಿ ಹೇಳಿದ್ದಾರೆ.

ಹೌದು ಕೊಲ್ಲಂ ಪೊಲೀಸ್ ಕಮಿಷನರ್, ಐಪಿಎಸ್ ಆಫೀಸರ್ ಮೇರಿನ್ ಜೋಸೆಫ್ ರಿಯಾದ್ ನಲ್ಲಿ ಅಡಗಿ ಕುಳಿತಿದ್ದ ರೇಪ್ ಆರೋಪಿ ಸುನಿಲ್ ಕುಮಾರ್ ಭದ್ರನ್ ರನ್ನು ಬಂಧಿಸಿ ಭಾರತಕ್ಕೆ ಎಳೆದು ತಂದಿದ್ದಾರೆ. ಸುನಿಲ್ ಕುಮಾರ್ ಸೌದಿ ಅರೇಬಿಯಾದಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡಿದ್ದ. 2017ರಲ್ಲಿ ಬಾಲಕಿಯೊಬ್ಬಳನ್ನು ರೇಪ್ ಮಾಡಿ ಪರಾರಿಯಾಗಿದ್ದ ಸುನಿಲ್ ಅಂದಿನಿಂದಲೇ ಕೆರಳದ ವಾಂಟೆಡ್ ಲಿಸ್ಟ್ ನಲ್ಲಿದ್ದ.

ನ್ಯೂಸ್ ಮಿನಟ್ ಪ್ರಕಟಿಸಿರುವ ವರದಿಯನ್ವಯ 2017ರಲ್ಲಿ ಸುನಿಲ್ ರಜೆ ನಿಮಿತ್ತ ಕೇರಳಕ್ಕೆ ಬಂದಿದ್ದ. ಈ ವೇಳೆ ಆತ ತನ್ನ ಗೆಳೆಯನ ತಮ್ಮನ ಮಗಳು, 13 ವರ್ಷದ ಬಾಲಕಿಯನ್ನು ಅತ್ಯಾಚಾರಗೈದಿದ್ದ. ಈ ವಿಚಾರವನ್ನು ಬಾಲಕಿ ತನ್ನ ಹೆತ್ತವರಿಗೆ ತಿಳಿಸಿದ್ದು, ಕಂಗಾಲಾದ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು. ಆದರೆ ಅಷ್ಟರಲ್ಲಾಗಲೇ ಆರೋಪಿ ಸೌದಿಗೆ ಪರಾರಿಯಾಗಿದ್ದ. ಇದಾದ ಬಳಿಕ ಈ ಪ್ರಕರಣ ಮೂಲೆಗೆ ಸರಿದಿತ್ತು.

ಆದರೆ 2019ರ ಜೂನ್ ನಲ್ಲಿ ಮೇರಿನ್ ಜೋಸೆಫ್ ಕೊಲ್ಲಂನ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡರು. ಕರ್ತವ್ಯಕ್ಕೆ ಹಾಜರಾಗುತ್ತಿದ್ದಂತೆಯೇ ಈ ಮಹಿಳಾ ಪೊಲೀಸ್ ಅಧಿಕಾರಿ ಧೂಳು ಹಿಡಿದಿದ್ದ ಮಹಿಳಾ ಹಾಗೂ ಮಕ್ಕಳಿಗೆ ಸಂಬಂಧಿಸಿದ ಪೆಂಡಿಂಗ್ ಫೈಲ್ ಗಳನ್ನು ತರಿಸಿಕೊಂಡಿದ್ದಾರೆ. ಈ ವೇಳೆ 2017ರ ಈ ಪ್ರಕರಣದ ಫೈಲ್ ಮೇರಿನ್ ಜೋಸೆಫ್ ಕಣ್ಣಿಗೆ ಬಿದ್ದಿದೆ. ಇಂಟರ್ ಪೋಲ್ ನೋಟಿಸ್ ಜಾರಿಗೊಳಿಸಿದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಔಉದೇ ಬೆಳವಣಿಗೆಗಳಾಗಿರಲಿಲ್ಲ. ಪ್ರಕರಣದ ತನಿಖೆ ಮೂಲೆ ಹಿಡಿದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರೂ, ಯಾವುದೇ ಬದಲಾವಣೆಗಳಾಗಿರಲಿಲ್ಲ ಎಂಬುವುದು ಅವರ ಗಮನಕ್ಕೆ ಬಂದಿತ್ತು.

ಹೀಗಾಗಿ ತಡ ಮಾಡದ ಈ ದಿಟ್ಟ ಅಧಿಕಾರಿ ಕೂಡಲೇ ಸೌದಿ ಅರೇಬಿಯಾಗೆ ತೆರಳಿದ್ದಾರೆ. ಅಲ್ಲಿ ದಾಖಲೆಗಳನ್ನು ಸಲ್ಲಿಸಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದ ಮೇರಿನ್ ಜೋಸೆಫ್ ಸುನಿಲ್ ಕುಮಾರ್ ರನ್ನು ಬಂಧಿಸಿ ಕೊಲ್ಲಂಗೆ ಎಳೆದು ತಂದಿದ್ದಾರೆ. ವಿದೇಶಕ್ಕೆ ಪರಾರಿಯಾಗಿದ್ದ ಕೇರಳದ ಆರೋಪಿಯೊಬ್ಬನನ್ನು ಬೆನ್ನತ್ತಿ ಬಂಧಿಸಿ ಮರಳಿ ಕರೆತಂದಿದ್ದು ಇದೇ ಮೊದಲು.

ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಮೇರಿನ್ ಜೋಸೆಫ್ 'ಈ ಪ್ರಕರಣದ ಫೈಲ್ ಪರಿಶೀಲಿಸಿದಾಗ ಕಳೆದೆರಡು ವರ್ಷಗಳಿಂದ ಆರೋಪಿ ಪರರಿಯಾಗಿದ್ದಾನೆಂಬ ವಿಚಾರ ತಿಳಿದು ಬಂತು. ಇಮಟರ್ ಪೋಲ್ ಮೂಲಕ ನೋಟಿಸ್ ಜಾರಿಗೊಳಿಸಿದ ಬಳಿಕ ತನಿಖೆ ಮುಂದುವರೆದಿರಲಿಲ್ಲ.  ಕೇರಳ ಪೊಲೀಸರ ಅಂತರಾಷ್ಟ್ರೀಯ ತನಿಖಾ ಸಂಸ್ಥೆ, ಸೌದಿ ಪೊಲೀಸರೊಂದಿಗೆ ಕೆಲಸ ನಿರ್ವಹಿಸುತ್ತಿದೆ. ನಾವು ಕೇವಲ ಇದನ್ನು ಇನ್ನಷ್ಟು ಬಲಪಡಿಸಿ, ಆರೋಪಿಯನ್ನು ಎಳೆದು ತಂದಿದ್ದೇವೆ' ಎಂದಿದ್ದಾರೆ.