ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಅವರು ಶುಕ್ರವಾರ ಬೆಂಗಳೂರು ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.

ಬೆಂಗಳೂರು : ರಾಜಕೀಯ ಬೆಳವಣಿಗೆ ಬಿರುಸಾಗಿ ನಡೆದಿರುವ ಸಂದರ್ಭದಲ್ಲೇ ‘ಆಪರೇಷನ್‌ ಕಮಲ’ದ ಬಂಡವಾಳ ಹೂಡಿಕೆದಾರರ ವಿರುದ್ಧ ಕಾರ್ಯಾಚರಣೆಗೆ ನಿಯೋಜಿತಗೊಂಡಿದ್ದಾರೆ ಎಂದೇ ಬಿಂಬಿತರಾಗಿರುವ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಅವರು ಶುಕ್ರವಾರ ಬೆಂಗಳೂರು ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಉತ್ತರ ವಲಯದ ಐಜಿಪಿ ಆಗಿದ್ದ ಅಲೋಕ್‌ ಅವರು ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಆಯುಕ್ತರ ಕಚೇರಿಗೆ ಆಗಮಿಸಿ ಕರ್ತವ್ಯಕ್ಕೆ ಹಾಜರಾತಿ ಹಾಕಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಫ್ತಾ ವಸೂಲಿ, ರೌಡಿ ಚಟುವಟಿಕೆ ಹಾಗೂ ಸಂಘಟಿತ ಅಪರಾಧ ಕೃತ್ಯಗಳ ನಿಮೂರ್ಲನೆಯೇ ನನ್ನ ಆದ್ಯತೆ. ಅಲ್ಲದೆ, ಸಿಸಿಬಿಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ತನಿಖೆಯನ್ನು ಶೀಘ್ರವೇ ಮುಕ್ತಾಯಗೊಳಿಸುತ್ತೇನೆ. ಅಧಿಕಾರಿಗಳ ಸಭೆ ಕರೆದು ಮುಂದಿನ ಕಾರ್ಯಸೂಚಿ ರೂಪಿಸುತ್ತೇನೆ ಎಂದು ತಿಳಿಸಿದರು.

ಇತ್ತೀಚೆಗೆ ಸರ್ಕಾರವು ಖಾಸಗಿ ವಲಯದ ಸಾಲಮನ್ನಾ ಘೋಷಣೆ ಮಾಡಿದ ಬಳಿಕ ಬಡ್ಡಿ ದಂಧೆಕೋರರು ದಬ್ಬಾಳಿಕೆ ಮೂಲಕ ಜನರಿಂದ ಸಾಲ ವಸೂಲಿಗಿಳಿದಿರುವ ಮಾಹಿತಿ ಬೆಳಕಿಗೆ ಬಂದಿತ್ತ. ಹಾಗೆಯೇ ಸರ್ಕಾರದ ಪತನಕ್ಕೆ ಸಿದ್ಧವಾಗಿರುವ ಆಪರೇಷನ್‌ ಕಮಲದ ಕಿಂಗ್‌ಪಿನ್‌ಗಳು ಎಂದು ಮುಖ್ಯಮಂತ್ರಿಗಳು ಆರೋಪಿಸಿದ ನಾಲ್ವರ ಪೈಕಿ ಒಬ್ಬಾತ ಬಡ್ಡಿ ದಂಧೆಕೋರನಾಗಿದ್ದ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಸಕ್ತಿ ವಹಿಸಿ ಅಲೋಕ್‌ ಕುಮಾರ್‌ ಅವರನ್ನು ಮತ್ತೆ ಬೆಂಗಳೂರಿಗೆ ನಿಯೋಜಿಸಿದ್ದಾರೆ. ಈ ಹಿಂದೆ ಅವರು ಬೆಂಗಳೂರಿನಲ್ಲಿ ಡಿಸಿಪಿ ಹಾಗೂ ಜಂಟಿ ಪೊಲೀಸ್‌ ಆಯುಕ್ತರಾಗಿ ಅವರು ಸೇವೆ ಸಲ್ಲಿಸಿದ್ದರು.