ನವದೆಹಲಿ[ಆ.27]: ಐಎನ್‌ಎಕ್ಸ್‌ ಮೀಡಿಯಾ ಹಗರಣ ಸಂಬಂಧ 5 ದಿನಗಳಿಂದ ಸಿಬಿಐ ವಶದಲ್ಲಿರುವ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ ಸೋಮವಾರ ಎರಡು ಹಿನ್ನಡೆಯಾಗಿದೆ.

1. ತಮ್ಮ ನಿರೀಕ್ಷಣಾ ಜಾಮೀನು ಕೋರಿಕೆಯನ್ನು ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್‌ ತೀರ್ಪಿನ ವಿರುದ್ಧ ಚಿದಂಬರಂ ಅವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಸಿಬಿಐ ಪ್ರಕರಣದಲ್ಲಿ ಈಗಾಗಲೇ ಬಂಧನವಾಗಿರುವುದರಿಂದ ನಿರೀಕ್ಷಣಾ ಜಾಮೀನು ನಿರರ್ಥಕವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

2. ಐದು ದಿನಗಳ ಕಾಲ ಚಿದಂಬರಂ ಅವರನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ ಸಿಬಿಐ, ಸೋಮವಾರ ಮತ್ತೆ ವಿಶೇಷ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಿದೆ. ವಿಚಾರಣೆಗೆ ಚಿದಂಬರಂ ಅವರು ಸಹಕರಿಸುತ್ತಿಲ್ಲವಾದ ಕಾರಣ ಇನ್ನೂ 5 ದಿನಗಳ ಕಾಲ ಅವರನ್ನು ವಶಕ್ಕೆ ನೀಡಬೇಕು ಎಂದು ಕೋರಿದೆ. ಇದನ್ನು ಒಪ್ಪಿರುವ ಕೋರ್ಟ್‌ ಆ.30ರವರೆಗೆ ಚಿದು ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಿದೆ.

INX ಮೀಡಿಯಾ ಹಗರಣ: ಮಾಜಿ ಹಣಕಾಸು ಸಚಿವ ಚಿದುಗೆ ಸಂಕಷ್ಟ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಸಂಸ್ಥೆಗಳು ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದವು. ಅವರಿಗೆ ದೆಹಲಿ ಹೈಕೋರ್ಟ್‌ ಮಧ್ಯಂತರ ರಕ್ಷಣೆ ಒದಗಿಸಿತ್ತು. ಆ.20ರಂದು ಮಧ್ಯಂತರ ರಕ್ಷಣೆಯನ್ನು ಹಿಂಪಡೆದು, ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿತ್ತು. ಅದಾದ ನಂತರ 27 ತಾಸು ಚಿದಂಬರಂ ಅವರು ನಾಪತ್ತೆಯಾಗಿದ್ದರು. ಆ.21ರಂದು ಅವರ ಬಂಧನವಾಗಿತ್ತು.

ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್‌ ತೀರ್ಪಿನ ವಿರುದ್ಧ ಚಿದಂಬರಂ ವಕೀಲರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸಿಬಿಐ ಕೇಸಿನಲ್ಲಿ ಚಿದಂಬರಂ ಬಂಧನವಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ಕೋರುವುದು ವ್ಯರ್ಥ ಎಂದು ನ್ಯಾಯಮೂರ್ತಿಗಳಾದ ಆರ್‌. ಭಾನುಮತಿ ಹಾಗೂ ಎ.ಎಸ್‌. ಬೋಪಣ್ಣ ಅವರಿದ್ದ ಪೀಠ ಹೇಳಿತು. ಅಲ್ಲದೆ ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಚಿದಂಬರಂ ಅವರನ್ನು ಬಂಧಿಸದಂತೆ ಮಂಗಳವಾರದವರೆಗೂ ಮಧ್ಯಂತರ ರಕ್ಷಣೆ ಮುಂದುವರಿಸಿತು.