1993ರ ಮುಂಬೈ ಸರಣಿ ಸ್ಫೋಟದ ರೂವಾರಿ, ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಗ್ಯಾಂಗ್ರಿನ್‌'ಗೆ ತುತ್ತಾಗಿ ಮರಣಶಯ್ಯೆಯಲ್ಲಿದ್ದಾನೆ, ಆತ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬೆಲ್ಲಾ ಗುಸುಗುಸು ನಡುವೆಯೇ, ಸ್ವತಃ ದಾವೂದ್ ಇಬ್ರಾಹಿಂ ಜೊತೆ ತಮ್ಮ ವರದಿಗಾರರೊಬ್ಬರು ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ ಎಂದು ಸಿಎನ್‌'ಎನ್- ನ್ಯೂಸ್ 18 ಖಾಸಗಿ ಸುದ್ದಿವಾಹಿನಿ ಗುರುವಾರ ವರದಿಯೊಂದನ್ನು ಪ್ರಕಟಿಸಿದೆ.

ನವದೆಹಲಿ(ಆ.11): 1993ರ ಮುಂಬೈ ಸರಣಿ ಸ್ಫೋಟದ ರೂವಾರಿ, ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಗ್ಯಾಂಗ್ರಿನ್‌'ಗೆ ತುತ್ತಾಗಿ ಮರಣಶಯ್ಯೆಯಲ್ಲಿದ್ದಾನೆ, ಆತ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬೆಲ್ಲಾ ಗುಸುಗುಸು ನಡುವೆಯೇ, ಸ್ವತಃ ದಾವೂದ್ ಇಬ್ರಾಹಿಂ ಜೊತೆ ತಮ್ಮ ವರದಿಗಾರರೊಬ್ಬರು ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ ಎಂದು ಸಿಎನ್‌'ಎನ್- ನ್ಯೂಸ್ 18 ಖಾಸಗಿ ಸುದ್ದಿವಾಹಿನಿ ಗುರುವಾರ ವರದಿಯೊಂದನ್ನು ಪ್ರಕಟಿಸಿದೆ.

ದಾವೂದ್‌'ನ ಹಲವು ವಿಡಿಯೋಗಳು ಈಗಾಗಲೇ ಇವೆಯಾದರೂ, ಆತನ ಧ್ವನಿಯನ್ನು ಇದೇ ಮೊದಲ ಬಾರಿಗೆ ಟೀವಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಸುದ್ದಿವಾಹಿನಿ ಹೇಳಿದೆ. ಜೊತೆಗೆ ದಾವೂದ್ ಪಾಕಿಸ್ತಾನದಲ್ಲಿ ಇಲ್ಲ ಎಂಬ ಅಲ್ಲಿನ ಸರ್ಕಾರದ ವಾದ ಕೂಡಾ ಸುಳ್ಳು ಎಂದು ಸುದ್ದಿವಾಹಿನಿ ವಿಶ್ಲೇಷಿಸಿದೆ.

ಕಳೆದ ಮೇ 31ರಂದು ಪಾಕಿಸ್ತಾನದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ, ಸ್ವತಃ ದಾವೂದ್ ಕರೆ ಸ್ವೀಕರಿಸಿದ್ದಾನೆ. ಆದರೆ ಕರೆ ಮಾಡಿದ ವ್ಯಕ್ತಿ ತಾನು ಭಾರತೀಯ ಪತ್ರಕರ್ತ ಎಂದು ಹೇಳಿದ ಕೂಡಲೇ ವಿಚಲಿತನಾದ ದಾವೂದ್, ಕೂಡಲೇ ತನ್ನ ಸಹಚರ ಜಾವೇದ್ ಚೋಟಾನಿಗೆ ಕರೆಯನ್ನು ವರ್ಗಾಯಿಸಿದ್ದಾನೆ. ಬಳಿಕ ಸುಮಾರು 19 ನಿಮಿಷಗಳ ಕಾಲ ದಾವೂದ್ ಮತ್ತು ಜಾವೇದ್ ವರದಿಗಾರ ಮನೋಜ್ ಅವರೊಂದಿಗೆ ಮಾತನಾಡಿದ್ದಾರೆ. ಈ ಮಾತುಕತೆ ವೇಳೆಗೆ ತನಗೆ ಗ್ಯಾಂಗ್ರಿನ್ ಆಗಿದೆ, ಹೃದಯಾಘಾತವಾಗಿದೆ ಎಂಬೆಲ್ಲಾ ವಾದಗಳನ್ನು ದಾವೂದ್ ತಿರಸ್ಕರಿಸಿದ್ದು, ಕೆಲ ಸಮಯ ಹಿಂದೆ ರಕ್ತದೊತ್ತಡ ಹೆಚ್ಚಿದ್ದು ಬಿಟ್ಟರೆ ಬೇರೇನೂ ತೊಂದರೆಯಿಲ್ಲ. ದೇವರ ದಯೆಯಿಂದ ಫಸ್ಟ್‌ ಕ್ಲಾಸ್ ಆಗಿದ್ದೇನೆ ಎಂದು ಹೇಳಿದ್ದಾನೆ.

ಮೇ 31ರಂದೇ ಈ ಕರೆ ಮಾಡಿದ್ದರೂ, ಧ್ವನಿ ದಾವೂದ್'ನದ್ದೇ ಎಂದು ಹಲವು ಗುಪ್ತಚರ ಸಂಸ್ಥೆಗಳು, ಭದ್ರತಾ ಅಧಿಕಾರಿಗಳ ಮೂಲಕ ಖಚಿತಪಡಿಸಿಕೊಂಡು ಇದೀಗ ವರದಿ ಪ್ರಕಟಿಸಲಾಗುತ್ತಿದೆ ಎಂದು ಸುದ್ದಿವಾಹಿನಿ ಹೇಳಿದೆ.

ದಾವೂದ್ ಜೊತೆ ಮಾತುಕತೆ ಹೀಗಿತ್ತು:

ಪತ್ರಕರ್ತ ಫೋನ್ ಮಾಡಿ, ‘ಇದು ದಾವೂದಾ?’ ಎಂದು ಕೇಳಿದಾಗ, ಫೋನ್ ಕರೆ ಸ್ವೀಕರಿಸಿದ್ದ ದಾವೂದ್, ಹಲೋ.. ಎನ್ನುತ್ತಿದ್ದಂತೆ, ಆ ಕಡೆಯಿಂದ ‘ಹೌದು... ಯಾರು ಇದು?’ ಎಂದು ಪ್ರಶ್ನಿಸುತ್ತಾನೆ. ಆಗ ತಾನು ಪತ್ರಕರ್ತನೆಂದು ಮನೋಜ್ ಗುಪ್ತಾ ಪರಿಚಯಿಸಿಕೊಂಡಾಗ, ಆ ಕಡೆಯಿಂದ, ಇಲ್ಲ ಇದು ಚೋಟಾನಿ ಎಂದು ಆತನಿಗೆ ದಾವೂದ್ ಫೋನ್ ನೀಡುತ್ತಾನೆ.

‘ಮೊದಲು ಮಾತನಾಡಿದ್ದು ದಾವೂದಾ?’ ಎಂದು ಚೋಟಾನಿ ಬಳಿ ಪತ್ರಕರ್ತ ಕೇಳಿದಾಗ, ‘ಹೌದು ಹೌದು, ಹೇಳಿ ಮನೋಜ್ ಭಾಯ್’ ಎಂದು ಆತ ಹೇಳುತ್ತಾನೆ. ‘ದಾವೂದ್ ಜೊತೆ ಮಾತನಾಡಬೇಕು’ ಎಂದು ಪತ್ರಕರ್ತ ಕೋರಿಕೊಂಡಾಗ, ‘ನನ್ನ ಜೊತೆಗೇ ಹೇಳಿ ಏನಾಯ್ತು?’ ಎಂದು ಪ್ರಶ್ನಿಸಿದ.

ಈ ವೇಳೆ ಪತ್ರಕರ್ತ, ‘ನೀವು ಪಾಕಿಸ್ತಾನದ ಕರಾಚಿಯಲ್ಲಿದ್ದೀರಾ?’ ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಚೋಟಾನಿ, ‘ಹಾಗಂತ ಯಾರು ಹೇಳಿದರು?’ ಎಂದು ಮರುಪ್ರಶ್ನಿಸುತ್ತಾನೆ. ನಂತರ ಮಾತನಾಡಿದ ಚೋಟಾನಿ, ಪತ್ರಕರ್ತನನ್ನು ಸ್ವಲ್ಪ ಹೊತ್ತು ತರಾಟೆಗೆ ತೆಗೆದುಕೊಂಡು, ನಿಮ್ಮ ನಂಬರ್ ಕೊಡಿ, ಸಂದರ್ಶನಕ್ಕೆ ವ್ಯವಸ್ಥೆ ಮಾಡಿಸುತ್ತೇನೆ ಎನ್ನುತ್ತಾನೆ. ಮಾತಿನ ನಡುವೆ, ಪರ್ತಕರ್ತ ತಾನು ದೆಹಲಿಯಲ್ಲಿರುವುದಾಗಿ ತಿಳಿಸಿದಾಗ, ‘ದುಬೈಗೆ ಬನ್ನಿ’ ಎಂದು ಚೋಟಾನಿ ಹೇಳುತ್ತಾನೆ.