ಬೆಂಗಳೂರು :  ಬಡ ವ್ಯಾಪಾರಿಗಳಿಗಾಗಿ ಬಡ್ಡಿ ರಹಿತವಾಗಿ ಒಂದು ದಿನದ ಮಟ್ಟಿಗೆ ಅಲ್ಪ ಮೊತ್ತದ ಸಾಲ ನೀಡುವ ಮೊಬೈಲ್‌ ಬ್ಯಾಂಕಿಂಗ್‌ ಸೌಲಭ್ಯ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಈಗಾಗಲೇ ಲೇವಾದೇವಿ ಸಾಲ ಮನ್ನಾ ಘೋಷಣೆ ಮಾಡಿರುವ ಕುಮಾರಸ್ವಾಮಿ, ಬಡ ವ್ಯಾಪಾರಿಗಳಿಂದ ಮೀಟರ್‌ ಬಡ್ಡಿ ಸುಲಿಗೆ ಮಾಡುವ ಲೇವಾದೇವಿ ಮಾಫಿಯಾ ಮೇಲೆ ಮತ್ತೊಂದು ಪ್ರಹಾರ ನಡೆಸಲು ಮುಂದಾಗಿದ್ದಾರೆ.

ಸಮಾಜ ಸಂಪರ್ಕ ವೇದಿಕೆಯು ಶನಿವಾರ ತುರಹಳ್ಳಿಯ ಭಾರತ್‌ ಹೌಸ್‌ ಬಿಲ್ಡಿಂಗ್‌ ಕೋ ಆಪರೇಟಿವ್‌ ಸೊಸೈಟಿ ಲೇಔಟ್‌ನಲ್ಲಿ ನಿರ್ಮಿಸಿರುವ ಮಹಿಳಾ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಅವರು, ‘ಕೆಲವರು ಕುಮಾರಸ್ವಾಮಿ ಕೈಲಿ ಏನೂ ಆಗಲ್ಲ ಎನ್ನುತ್ತಿದ್ದರು. ಇನ್ನೊಂದು ಮೂರ್ನಾಲ್ಕು ತಿಂಗಳು ಕಾಯಿರಿ. ಏಕೆಂದರೆ, ಬಡವರಿಗಾಗಿ ರಾಜ್ಯ ಸರ್ಕಾರದಿಂದ ಮೊಬೈಲ್‌ ಬ್ಯಾಂಕಿಂಗ್‌ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಯೋಜನೆಯಡಿ ಬಡ ವ್ಯಾಪಾರಿಗಳು ಪ್ರತಿ ದಿನ ಬೆಳಗ್ಗೆ 1 ಸಾವಿರ ರು.ಗಳನ್ನು ಬಡ್ಡಿ ರಹಿತ ಹಣ ಪಡೆದು ಸಂಜೆ ಆ ಹಣವನ್ನು ಮರುಳಿಸಲು ಅವಕಾಶ ನೀಡಲಾಗುವುದು. ಇದರಿಂದ ಖಾಸಗಿಯವರಿಗೆ ಬಡ್ಡಿ ಕಟ್ಟುವುದು ತಪ್ಪಲಿದೆ’ ಎಂದರು.

ಸರ್ಕಾರದಿಂದಲೇ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಿಕೆ:  ರಾಜ್ಯದಲ್ಲಿ 75 ಲಕ್ಷ ರೈತ ಕುಟುಂಬಗಳಿದ್ದು, ಈ ಪೈಕಿ 40ರಿಂದ 45 ಲಕ್ಷ ಕುಟುಂಬಗಳು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಪಡೆಯುತ್ತಿವೆ. ಉಳಿದ 30 ಲಕ್ಷ ಮಂದಿ ಖಾಸಗಿ ವ್ಯಕ್ತಿಗಳ ಬಳಿ ಸಾಲ ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ರೂಪಿಸಲು ಚಿಂತಿಸಲಾಗಿದೆ ಎಂದರು.

ಸಮಸ್ಯೆ ಹೇಳಿಕೊಳ್ಳಲು ಶನಿವಾರ ಮಾತ್ರ ಬನ್ನಿ :  ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮನೆ, ಕಚೇರಿ ಬಳಿ ಬಂದು ಕಷ್ಟಹೇಳಿಕೊಳ್ಳುತ್ತಾರೆ. ಪ್ರತಿ ದಿನ ಸಮಸ್ಯೆ ಆಲಿಸುತ್ತಾ ಕುಳಿತರೆ ಆಡಳಿತಯಂತ್ರ ಬಿಗಿಗೊಳಿಸಲು, ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರತಿ ಶನಿವಾರ ಇಡೀ ದಿನ ಜನರ ಸಮಸ್ಯೆ ಆಲಿಸಿ ಪರಿಹಾರ ನೀಡುತ್ತೇನೆ. ಹಾಗಾಗಿ ಜನ ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು.