ಸಾಕಷ್ಟು ವಿರೋಧದ ನಡುವೆಯೂ ನಟ ಪ್ರಕಾಶ್ ರೈಗೆ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಬೆಂಗಳೂರು (ಅ.10): ಸಾಕಷ್ಟು ವಿರೋಧದ ನಡುವೆಯೂ ನಟ ಪ್ರಕಾಶ್ ರೈಗೆ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನುಪ್ರದಾನ ಮಾಡಲಾಗಿದೆ.
"ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ. ಬಹಳಷ್ಟು ಪ್ರಶಸ್ತಿಗಳಿಗೆ ನನಗೆ ಕರೆ ಬಂದಿವೆ. ಆದರೆ ಶಿವರಾಮ ಕಾರಂತ ಪ್ರಶಸ್ತಿ ನೀಡುವ ಆನಂದವೇ ಬೇರೆ. ಅಜ್ಜನ ಮನೆಗೆ ಬಂದ ಮೊಮ್ಮಗನಷ್ಟು ಸಂತೋಷವಾಗಿದೆ. ಕಾರಂತರ ಬಗ್ಗೆ ಮಾತಾಡೋದೆ ಒಂದು ರೋಮಾಂಚನ. ಪ್ರಶಸ್ತಿ ಬಗ್ಗೆ ಮೊದಲು ಅಮ್ಮನಿಗೆ ಹೇಳಿ ಸಂತೋಷ ಪಟ್ಟೆ. ಕಾರಂತರು ಬರೆದ ಹಾಗೆ ಬದುಕಿದವರು, ಬದುಕಿದ್ದನ್ನೇ ಬರೆದರು ಎಂದು ಕೋಟತಟ್ಟುವಿನಲ್ಲಿ ನಟ ಪ್ರಕಾಶ್ ರೈ ಹೇಳಿದ್ದಾರೆ.
ಪ್ರಶಸ್ತಿ ಸಿಕ್ಕಿದ್ದು ಬಹಳ ಸಂತೋಷದ ವಿಷಯ. ಯಾರು ಗೆದ್ದರು, ಸೋತರು ಎಂಬುವುದು ಮುಖ್ಯವಲ್ಲ. ಪ್ರಶಸ್ತಿ ಪ್ರದಾನ ಆಗಬೇಕಿತ್ತು, ನಾನು ಪ್ರಶಸ್ತಿಗೆ ಅರ್ಹನಾಗಿದ್ದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಸೋತ ಕ್ಷಣ ಎಂದು ಪ್ರಕಾಶ್ ರೈ ಪ್ರಶಸ್ತಿ ಸ್ವೀಕರಿಸಿ ಹೇಳಿದ್ದಾರೆ.
ಕರ್ನಾಟಕದಲ್ಲಿ ನನ್ನ ಹಾಗೆ ಮಾತಾಡೋರು ಒಂಟಿಯಲ್ಲ. ಅವರಿಗೂ ಸ್ವಾತಂತ್ರ್ಯ ಇದೆ. ವೈಯಕ್ತಿಕ ವಿಚಾರ ಹೇಳಿ ಹಣಿಯುವ ಕೃತ್ಯ ಇನ್ನು ಕನ್ನಡ ನಾಡಲ್ಲಿ ನಡೆಯೋದಿಲ್ಲ. ಕಾರಂತರಂತೆ ನಿರ್ಧಾರ ಮಾಡಿದ್ರೆ ಹಿಂತೆಗೆಯೋ ಪ್ರಶ್ನೆಯೇ ಇಲ್ಲ. ನನ್ನ ಜೀವನ ನೋಡಿದವರಿಗೆ ನಾನೇನು ಅಂತ ಗೊತ್ತು ಎಂದು ಪ್ರಕಾಶ್ ರೈ ಹೇಳಿದ್ದಾರೆ.
