ಅಧ್ಯಾತ್ಮ ಗುರುವಿನ ಬಲಗೈ ಬಂಟ, ಚಾಲಕ, ಮಹಿಳೆಯ ಬಂಧನ| ವಿವಾಹವಾಗದಿದ್ದರೆ ರೇಪ್‌ ದೂರು ದಾಖಲಿಸುವುದಾಗಿ ಹೆದರಿಸಿದ್ದ ಮಹಿಳೆ

ಇಂದೋರ್‌[ಜ.20]: ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಜನಪ್ರಿಯರಾಗಿದ್ದ ಅಧ್ಯಾತ್ಮಿಕ ಗುರು ಭಯ್ಯೂಜಿ ಮಹಾರಾಜ್‌ ಅವರು ಕಳೆದ ವರ್ಷ ಜೂನ್‌ನಲ್ಲಿ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಭಯ್ಯೂಜಿ ಅವರು ಸಾವಿಗೆ ಶರಣಾಗಿದ್ದಕ್ಕೆ ಅವರ ಇಬ್ಬರು ಬಂಟರ ಜತೆಗೂಡಿ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದೇ ಕಾರಣ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಭಯ್ಯೂಜಿ ಮಹಾರಾಜ್‌ ಅವರ ಬಲಗೈ ಬಂಟ ವಿನಾಯಕ್‌ ಧುಲೆ, ಕಾರು ಚಾಲಕ ಶರದ್‌ ದೇಶಮುಖ್‌ ಹಾಗೂ ಭಕ್ತೆ ಪಾಲಕ್‌ ಎಂಬುವವರೇ ಬಂಧಿತರು. ಭಯ್ಯೂಜಿ ಅವರ ಭಕ್ತೆಯಾಗಿ ಆಶ್ರಮಕ್ಕೆ ಸೇರಿದ ಪಾಲಕ್‌, ಅಧ್ಯಾತ್ಮ ಗುರುವಿನ ಜತೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದರು. ಇಬ್ಬರೂ ಮೊಬೈಲ್‌ನಲ್ಲಿ ಅಶ್ಲೀಲ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರು. ಪಾಲಕ್‌ ಜತೆಗೂಡಿದ ವಿನಾಯಕ್‌ ಹಾಗೂ ಶರದ್‌ ಅವರುಗಳು ಭಯ್ಯೂಜಿ ಅವರ ಬ್ಲ್ಯಾಕ್‌ಮೇಲ್‌ ಆರಂಭಿಸಿದ್ದರು. ಪಾಲಕ್‌ಳನ್ನು ವಿವಾಹವಾಗದಿದ್ದರೆ ಅತ್ಯಾಚಾರ ಆರೋಪ ಮಾಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಆಸ್ತಿಯಲ್ಲಿ ಪಾಲು ಪಡೆಯುವುದು ಆರೋಪಿಗಳ ಉದ್ದೇಶವಾಗಿತ್ತು.

ಅಷ್ಟರಲ್ಲಾಗಲೇ ದಾತಿ ಮಹಾರಾಜ್‌ ಎಂಬ ಅಧ್ಯಾತ್ಮ ಗುರುವಿನ ವಿರುದ್ಧ ಭಕ್ತೆಯೊಬ್ಬಳು ಅತ್ಯಾಚಾರ ಆರೋಪ ಮಾಡಿ ರಾದ್ಧಾಂತವಾಗಿತ್ತು. ಅದೇ ರೀತಿ ತಮಗೂ ಶಾಸ್ತಿಯಾಗಲಿದೆ ಎಂದು ಭಯ್ಯೂಜಿ ಅವರಿಗೆ ಆರೋಪಿಗಳು ಹೆದರಿಸಿದ್ದರು. ದಾತಿ ಮಹಾರಾಜ್‌ ಕುರಿತ ಸುದ್ದಿಗಳನ್ನು ಟೀವಿಯಲ್ಲಿ ನೋಡಿ ಕಂಗಾಲಾಗಿದ್ದ ಭಯ್ಯೂಜಿ 2018ರ ಜೂ.12ರಂದು ತಮ್ಮ ಕೋಣೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಭಯ್ಯೂಜಿ ಅವರ ವಿಲ್‌ (ಉಯಿಲು) ಪತ್ತೆಯಾಗಿತ್ತು. ಅದರಲ್ಲಿ ವಿನಾಯಕ್‌ನನ್ನು ಆಸ್ತಿಯ ಮೇಲುಸ್ತುವಾರಿಯಾಗಿ ನೇಮಿಸಿರುವ ಅಂಶ ಪತ್ತೆಯಾಗಿತ್ತು.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 306 (ಆತ್ಮಹತ್ಯೆಗೆ ಕುಮ್ಮಕ್ಕು), 120 ಬಿ (ಸಂಚು), 384 (ಸುಲಿಗೆ) ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ನ್ಯಾಯಾಲಯ 15 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.