ಇಂಡೋನೇಷ್ಯಾ, (ಅ.11): ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನಿಂದ ಪ್ರಭಾವಿತಗೊಂಡ ವ್ಯಕ್ತಿಯೊಬ್ಬ ಇಂಡೋನೇಷ್ಯಾದ ರಕ್ಷಣಾ ಸಚಿವ ವಿರಾಂತೋ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. 72 ವರ್ಷದ ಸಚಿವರ ಹೊಟ್ಟೆಗೆ ಎರಡು ಬಾರಿ ಚಾಕುವಿನಿಂದ ಇರಿಯಲಾಗಿದೆ. ಗಂಬೀರವಾಗಿ ಗಾಯಗೊಂಡಿದ್ದ ವಿರಾಂತೋರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. 

ಜಾವಾ ದ್ವೀಪದ ಪಂಡೇಗ್ಲಾಗ್ ನಲ್ಲಿರುವ ಯೂನಿವರ್ಸಿಟಿ ಹೊರಗೆ ಅಚಾನಕ್ಕಾಗಿ ನಡೆದ ಈ ದಾಳಿಯಲ್ಲಿ ರಕ್ಷಣಾ ಸಚಿವರು, ಸ್ಥಳೀಯ ಪೊಲೀಸ್ ಅಧಿಕಾರಿ ಹಾಗೂ ಸಚಿವರ ಇಬ್ಬರು ಅಂಗರಕ್ಷಕರು ಗಾಯಗೊಂಡಿದ್ದಾರೆ.

ವಿರಾಂತೋಗೆ ಶಸ್ತ್ರ ಚಿಕಿತ್ಸೆ

ದಾಳಿ ನಡೆದ ಕೂಡಲೇ ರಕ್ಷಾಣ ಸಚಿವರನ್ನು ಹೆಲಿಕಾಪ್ಟರ್ ಮೂಲಕ ರಾಜಧಾನಿ ಜಕಾರ್ತಾದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಇಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರಕರಣ ಸಂಬಂಧ ಚಾಕು ಇರಿದ ಎಸ್. ಆಲಮ್ ಶಾ ಹಾಗೂ ಆತನ ಸಹೋದ್ಯೋಗಿ 21 ವರ್ಷದ ಫಿತ್ರೀ ಆ್ಯಂಡ್ರಿಯಾನಾರನ್ನು ಸ್ಥಳದಲ್ಲೇ ಬಂಧಿಸಿ, ವಿಚಾರಣೆ ಆರಂಭಿಸಲಾಗಿದೆ.