ನಾಗಪುರ[ಜ.08]: ಪಕ್ಷ ಸೋತಾಗ ಅದರ ನಾಯಕರಾದವರು ಸೋಲಿನ ಹೊಣೆ ಹೊರಬೇಕು ಎಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಳಿಕ ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಟಾಂಗ್‌ ನೀಡಿದ್ದ ಕೇಂದ್ರ ಸಚಿವ, ಬಿಜೆಪಿ ಮುಖಂಡ ನಿತಿನ್‌ ಗಡ್ಕರಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ತುರ್ತು ಪರಿಸ್ಥಿತಿ ಹೇರಿದ್ದ ಕಾರಣಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಬಿಜೆಪಿ ನಾಯಕರು ವಿರೋಧಿಸುತ್ತಿದ್ದರೆ, ಗಡ್ಕರಿ ಇಂದಿರಾ ಅವರನ್ನೇ ಹಾಡಿ ಹೊಗಳಿದ್ದಾರೆ. ಅಲ್ಲದೆ ಧರ್ಮ ಆಧಾರಿತ ರಾಜಕಾರಣಕ್ಕೆ ನನ್ನ ವಿರೋಧವಿದೆ ಎಂದು ಘೋಷಿಸಿದ್ದಾರೆ.

ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಇಂದಿರಾ ಗಾಂಧಿ ಅವರು ಯಾವುದೇ ಮೀಸಲಾತಿ ಬಳಸಿರಲಿಲ್ಲ. ಕಾಂಗ್ರೆಸ್ಸಿನ ಪುರುಷ ನಾಯಕರಿಗಿಂತ ಅವರು ಉತ್ತಮ ಸಾಧನೆ ಮಾಡಿದ್ದರು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗೆದ್ದಾಗ ಬೀಗುವವರು, ಸೋಲಿನ ಹೊಣೆಯೂ ಹೊರಬೇಕು: ಗಡ್ಕರಿ ಪರೋಕ್ಷ ಟಾಂಗ್!

ನಾಗಪುರದಲ್ಲಿ ಭಾನುವಾರ ಸ್ವಸಹಾಯ ಸಂಘಗಳ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿಗೆ ನನ್ನ ವಿರೋಧವಿಲ್ಲ. ಆದರೆ ಜಾತಿ ಹಾಗೂ ಧರ್ಮ ಆಧಾರಿತ ರಾಜಕಾರಣಕ್ಕೆ ನನ್ನ ವಿರೋಧವಿದೆ ಎಂದು ಹೇಳಿದರು.

ಬಿಜೆಪಿ ನಾಯಕರಾದ ಸುಷ್ಮಾ ಸ್ವರಾಜ್‌, ವಸುಂಧರಾ ರಾಜೇ ಹಾಗೂ ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಮೀಸಲಾತಿ ಲಾಭವಿಲ್ಲದೇ ಇದ್ದರೂ, ರಾಜಕಾರಣದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಹಾಗಂತ ಮಹಿಳಾ ಮೀಸಲಿಗೆ ವಿರೋಧಿ ನಾನಲ್ಲ. ಮಹಿಳೆಯರಿಗೆ ಮೀಸಲಾತಿ ಬೇಕು. ಆದರೆ ಒಬ್ಬ ವ್ಯಕ್ತಿ ಜ್ಞಾನದ ಮೇಲೆ ಉತ್ತಮ ಸಾಧನೆ ಮಾಡುತ್ತಾನೆಯೇ ಹೊರತು ಭಾಷೆ, ಜಾತಿ, ಧರ್ಮ ಅಥವಾ ಪ್ರಾಂತ್ಯದ ಮೇಲಲ್ಲ ಎಂದು ಹೇಳಿದರು.