ಅಗತ್ಯವಿರುವ ಬಸ್ ನಿಲ್ದಾಣಗಳಲ್ಲಿ ಟ್ರಾನ್ಸಿಟ್ ಆಸ್ಪತ್ರೆ | ಸಚಿವ ರಮೇಶ್‌ಕಮಾರ್ ಘೋಷಣೆ | ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕ್ಲಿನಿಕ್‌ಗೆ ಚಾಲನೆ

ಬೆಂಗಳೂರು: ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರು ದಟ್ಟಣೆ ಇರುವ ಬಸ್ ನಿಲ್ದಾಣಗಳಲ್ಲಿ ‘ಇಂದಿರಾ ಟ್ರಾನ್ಸಿಟ್ ಕ್ಲಿನಿಕ್’ ಆರಂಭಿಸಲು ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಕ್ಲಿನಿಕ್ ಆರಂಭಕ್ಕೆ ಶೀಘ್ರ ಅನುಮತಿ ನೀಡುವುದಾಗಿ ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ಘೋಷಿಸಿದರು.

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಶನಿವಾರ ನೂತನ ‘ಇಂದಿರಾ ಟ್ರಾನ್ಸಿಟ್ ಕ್ಲಿನಿಕ್’ ಉದ್ಘಾಟಿಸಿ ಮಾತನಾಡಿದ ಅವರು, ಕಾಯಿಲೆ ಯಾವಾಗ ಬರುತ್ತೆ ಎಂದು ಹೇಳಲು ಆಗುವುದಿಲ್ಲ. ಒಮ್ಮೆ ಜೀವ ಹೋದರೆ ಮರಳಿ ಬರಲ್ಲ. ಹಾಗಾಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳ ಅಗತ್ಯ ಹೆಚ್ಚಿದೆ. ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಕ್ಲಿನಿಕ್ ಅತ್ಯವಶ್ಯಕ. ದೂರದೂರುಗಳಿಂದ ಬರುವ ಜನರಿಗೆ ಆರೋಗ್ಯದಲ್ಲಿ ದಿಢೀರ್ ಏರುಪೇರಾದರೆ ಕೂಡಲೇ ತುರ್ತು ಚಿಕಿತ್ಸೆ ಪಡೆಯಲು ಇದು ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ಬಿಎಂಟಿಸಿ ತೆಗೆದುಕೊಂಡಿರುವ ನಿರ್ಧಾರ ಸರಿಯಿದೆ. ಮುಂದಿನ ದಿನಗಳಲ್ಲಿ ಅಗತ್ಯವಿರುವ ಕಡೆ ಈ ಕ್ಲಿನಿಕ್‌ಗಳನ್ನು ವಿಸ್ತರಿಸಲು ಮುಂದಾಗಬೇಕು. ಇದಕ್ಕೆ ಆರೋಗ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಬಿಎಂಟಿಸಿಯು ಯೋಜನೆಗೆ ಇಂದಿರಾ ಗಾಂಧಿ ಹೆಸರಿಟ್ಟಿರುವುದನ್ನು ಶ್ಲಾಘಿಸಿದ ಸಚಿವರು, ಇಂದಿರಾ ಗಾಂಧಿ ಎಂಬುದು ಕೇವಲ ಹೆಸರಲ್ಲ, ಅದೊಂದು ಶಕ್ತಿ ಹಾಗೂ ಆಲೋಚನೆ. ಈ ದೇಶದಲ್ಲಿ ಬಡವರಿಗೆ ಮಾತನಾಡುವ ಹಾಗೂ ಹೊಟ್ಟೆ ತುಂಬಾ ಊಟ ಮಾಡುವ ಶಕ್ತಿ ಕೊಟ್ಟ ಮಹಾತಾಯಿ. ಇತ್ತೀಚೆಗೆ ಇಂದಿರಾ ಹೆಸರು ಕೊಂಚ ಮಂಕಾಗಿದೆ. ಅಂದರೆ ನಾವು ಎಲ್ಲೋ ಯಾಮಾರಿದ್ದೇವೆ ಅಂತ ಅರ್ಥ. ಇದನ್ನು ಸರಿಪಡಿಸಿಕೊಂಡು ಮತ್ತೆ ಪುಟಿದೇಳಲಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಲ್ಲಿ ಲಕ್ಕಕ್ಕೂ ಹೆಚ್ಚು ನೌಕರರಿದ್ದಾರೆ. ಅದರಲ್ಲೂ ಚಾಲಕ ಮತ್ತು ನಿರ್ವಾಹಕರ ಕೆಲಸ ಬಹುಕಷ್ಟದ ಕೆಲಸ. ಇವರ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಹಾಗಾಗಿ ನಾಲ್ಕು ನಿಗಮಗಳು ತಮ್ಮ ವ್ಯಾಪ್ತಿಯಲ್ಲಿ ಸೂಪರ್ ಸ್ಪೆಷಾಲಿಟಿ ನಿರ್ಮಿಸಲಿ. ಈ ಸಂಬಂಧ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ ಒಪ್ಪಿಗೆ ನೀಡುವುದಾಗಿ ಭರವಸೆ ನೀಡಿದರು.

ಅಂತೆಯೇ ಸಾರಿಗೆ ನಿಗಮಗಳ ನೌಕರರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯವೂ ಇದೆ. ಅಧಿಕಾರಿಗಳ ಮಕ್ಕಳಂತೆ ಚಾಲಕ, ನಿರ್ವಾಹಕರ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು. ಅವರೂ ಅಧಿಕಾರಿಗಳಾಗಬೇಕು. ಹಾಗಾಗಿ ಪ್ರತಿ ಜಿಲ್ಲೆಯಲ್ಲೂ ಸಾರಿಗೆ ನೌಕರರ ಮಕ್ಕಳಿಗಾಗಿ ವಸತಿ ಶಾಲೆಗಳ ಅಗತ್ಯವಿದೆ. ಸಾರಿಗೆ ಇಲಾಖೆಯವರು ಶಿಕ್ಷಣ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಪ್ರಸ್ತಾವನೆ ಸಲ್ಲಿಸಿದರೆ ನಾನು ಬೆಂಬಲ ಸೂಚಿಸುತ್ತೇನೆ. ಸಚಿವ ಸಂಪುಟ ಸಭೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.

ಸಾರಿಗೆ ಸಚಿವರು ಈ ಸಂಬಂಧ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಚುನಾವಣೆಗೂ ಮುನ್ನ ಸಾರಿಗೆ ನೌಕರರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮಕ್ಕಳಿಗೆ ವಸತಿ ಶಾಲೆಗಳನ್ನು ಘೋಷಿಸಬೇಕು ಎಂದರು. ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಬಿಎಂಟಿಸಿಯು ಪ್ರಯಾಣಿಕ ಸ್ನೇಹಿ ಸಾರಿಗೆಯಾಗಿ ದೇಶದಲ್ಲಿ ಉತ್ತಮ ಹೆಸರು ಗಳಿಸಿದೆ. ಇದೀಗ ನಿಗಮಕ್ಕೆ ಅತ್ಯಾಧುನಿಕ ಸೌಲಭ್ಯಗಳ ಹೊಸ ಬಸ್ ಗಳನ್ನು ಸೇರ್ಪಡೆ ಮಾಡುತ್ತಿದ್ದೇವೆ. ಈಗ ಇಂದಿರಾ ಟ್ರಾನ್ಸಿಟ್ ಕ್ಲಿನಿಕ್ ಆರಂಭಿಸಿದ್ದೇವೆ. ಶೀಘ್ರದಲ್ಲಿ ಇಂದಿರಾ ಸಾರಿಗೆ, ಇಂದಿರಾ ಪಾಸ್, ಪಿಂಕ್ ಆಸನ ಅಳವಡಿಕೆ ಅನುಷ್ಠಾನಗೊಳಿಸಲಿದ್ದೇವೆ. ಅಲ್ಲದೆ, ಈಗಾಗಲೇ ಯಶವಂತಪುರ ಟಿಟಿಎಂಸಿಯಲ್ಲಿ 36 ಸಾವಿರ ಚದರಡಿ ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ತೀರ್ಮಾನಿಸಿದ್ದು, ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರೋಗ್ಯ ಸಚಿವರು ಅದಕ್ಕೆ ಶೀಘ್ರ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್, ಉಪಾಧ್ಯಕ್ಷ ಬಿ.ಗೋವಿಂದ ರಾಜು, ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್, ಭದ್ರತಾ ದಳದ ನಿದೇರ್ಶಕ ಡಾ.ಎ.ಎನ್. ಪ್ರಕಾಶ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.