ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಇಂದಿರಾ ಕ್ಯಾಂಟೀನ್’ನ್ನು ರಾಜ್ಯಾದ್ಯಂತ ಆರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರು(ಸೆ.06): ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಇಂದಿರಾ ಕ್ಯಾಂಟೀನ್’ನ್ನು ರಾಜ್ಯಾದ್ಯಂತ ಆರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮಂಗಳವಾರ ನಗರದ ಬಿಇಎಲ್ ರಸ್ತೆ ಮತ್ತು ಗಂಗಾನಗರದ ಇಂದಿರಾ ಕ್ಯಾಂಟೀನ್‌'ಗಳಿಗೆ ಭೇಟಿ ನೀಡಿ ಅಲ್ಲಿನ ಗುಣಮಟ್ಟ ಪರಿಶೀಲಿಸಿದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಅನ್ನಭಾಗ್ಯದಂತೆ ‘ಇಂದಿರಾ ಕ್ಯಾಂಟೀನ್’ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯೋಜನೆ ಜನಪ್ರಿಯತೆಯಿಂದ ಸರ್ಕಾರಕ್ಕೆ ಮತ್ತಷ್ಟು ಉತ್ತೇಜನ ದೊರೆತಿದೆ. ಪ್ರಸ್ತುತ 101 ವಾರ್ಡ್‌'ಗಳಲ್ಲಿ ಆರಂಭವಾಗಿರುವ ಇಂದಿರಾ ಕ್ಯಾಂಟೀನ್ ಅ.2ರಂದು ಉಳಿದ ವಾರ್ಡುಗಳಲ್ಲೂ ಪ್ರಾರಂಭವಾಗಲಿವೆ. ಇದರಿಂದ ನಗರದಲ್ಲಿ ನಿತ್ಯ 3 ಲಕ್ಷ ಶ್ರಮಿಕ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಊಟ ತಿಂಡಿ ದೊರೆಯುತ್ತದೆ. ಇದು ರಾಜ್ಯದ ಎಲ್ಲ ಶ್ರಮಿಕ ವರ್ಗಕ್ಕೂ ಸಿಗುವಂತಾಗಬೇಕು. ಹಾಗಾಗಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ ಎಂದರು.

ಹೊಟ್ಟೆ ತುಂಬಿದವರು:

ಬಿಜೆಪಿಯವರು ಹೊಟ್ಟೆ ತುಂಬಿದವರು, ಬಡವರ ಹಸಿವಿನ ಬಗ್ಗೆ ಅರಿವಿಲ್ಲ. ಹಾಗಾಗಿ ಇಂದಿರಾ ಕ್ಯಾಂಟೀನ್ ಬಗ್ಗೆ ಅನಗತ್ಯವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ. ಜನಪ್ರಿಯ ಯೋಜನೆ ಬಗ್ಗೆ ಉದ್ದೇಶಪೂರ್ವಕವಾಗಿ ಟೀಕೆ ಮಾಡುವವರಿಗೆ ಜನರೇ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ ಎಂದರು.

ಪರಮೇಶ್ವರ್ ಗಂಗಾನಗರದ ಕ್ಯಾಂಟೀನ್‌ಗೆ ಬಂದಾಗ ಕ್ಯಾಂಟೀನ್ ನಿವಾರ್ಹಕ ಬೆಳಗಿನ ತಿಂಡಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಇದರಿಂದ ಕ್ಯಾಂಟೀನ್‌ಗೆ ಬರುವವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು. ತಕ್ಷಣ ಬಿಬಿಎಂಪಿ ಆಯುಕ್ತರಿಗೆ ಕರೆ ಮಾಡಿದ ಪರಮೇಶ್ವರ್, ತಿಂಡಿ ಪ್ರಮಾಣದಲ್ಲಿ ಹೆಚ್ಚಳ ಮಾಡಿ ಮತ್ತಷ್ಟು ಗುಣಮಟ್ಟ ಕಾಯ್ದುಕೊಳ್ಳಲು ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.