ಗಣರಾಜ್ಯೋತ್ಸವ ದಿನ 24 ಸಂಚಾರಿ ಇಂದಿರಾ ಕ್ಯಾಂಟೀನ್’ಗಳ ಉದ್ಘಾಟನೆ

news | Monday, January 15th, 2018
Suvarna Web Desk
Highlights

ಇಂದಿರಾ ಕ್ಯಾಂಟೀನ್‌ಗೆ ಸ್ಥಳಾವಕಾಶ ದೊರೆಯದ 24 ವಾರ್ಡ್‌ಗಳಲ್ಲಿ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳ ಆರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಜ.26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧ ಮುಂಭಾಗ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗೆ ಸ್ಥಳಾವಕಾಶ ದೊರೆಯದ 24 ವಾರ್ಡ್‌ಗಳಲ್ಲಿ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳ ಆರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಜ.26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧ ಮುಂಭಾಗ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಟೆಂಡರ್ ಮೂಲಕ 24 ವಾಹನಗಳನ್ನು ಪಡೆದು ‘ಫುಡ್ ಆನ್ ವ್ಹೀಲ್ಸ್ ’ ಎಂಬ ಪರಿಕಲ್ಪನೆಯಲ್ಲಿ ಸಂಚಾರಿ ಇಂದಿರಾ ಕ್ಯಾಂಟೀನ್ ಗಳನ್ನು ವಿನ್ಯಾಸ ಮಾಡಲಾಗಿದೆ. ಇವು ಜ.26ರಿಂದ ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟ ಮತ್ತು ತಿಂಡಿಯನ್ನು ನಿಗದಿತ ಸ್ಥಳದಲ್ಲಿ ವಿತರಿಸಲಿದೆ. ಈಗಾಗಲೇ 155ಕ್ಕೂ ಹೆಚ್ಚು ವಾರ್ಡುಗಳಲ್ಲಿ ಕ್ಯಾಂಟೀನ್‌ಗಳು ಆರಂಭವಾಗಿವೆ.

ಸೂಕ್ತ ಸ್ಥಳಾವಕಾಶ ದೊರೆಯದ 24 ವಾರ್ಡುಗಳಲ್ಲಿ ಈಗ ತಲಾ ಒಂದು ಸಂಚಾರಿ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತಿದೆ. ಮೊಬೈಲ್ ಕ್ಯಾಂಟೀನ್‌ಗಳಲ್ಲಿ ಬಿಲ್ ಕೌಂಟರ್, ಆಹಾರ ವಿತರಣಾ ಕೌಂಟರ್‌ಗಳು, ಆಹಾರ ಬಿಸಿಯಾಗಿಡಲು ಹಾಟ್ ಕೇಸ್‌ಗಳನ್ನು ಪ್ರತ್ಯೇಕವಾಗಿ ಅಳವಡಿಸಲಾಗುತ್ತದೆ. ಕುಡಿಯುವ ನೀರು, ಕೈ ತೊಳೆಯುವ ನೀರಿಗಾಗಿ ಪ್ರತ್ಯೇಕ ನೀರಿನ ಟ್ಯಾಂಕ್ ಅಳವಡಿಸಲಾಗುತ್ತದೆ. ಡ್ರೈವರ್ ಸೇರಿದಂತೆ ಐದು ಜನ ಸಿಬ್ಬಂದಿ ಪ್ರತಿ ಕ್ಯಾಂಟೀನ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಕೈ ತೊಳೆದ ನೀರು, ಊಟ ಮಾಡಿದ ತಟ್ಟೆಗಳ ಶೇಖರಣೆಗೆ ಪ್ರತ್ಯೇಕ ಟಬ್ ಅಳವಡಿಸಲಾಗುತ್ತದೆ

ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವವಲಯದ ಹಲಸೂರು, ಶಿವಾಜಿನಗರ, ಕಾಚರಕನಹಳ್ಳಿ, ಮನೋರಾಯನ ಪಾಳ್ಯವಾರ್ಡ್‌ಗಳು, ಪಶ್ಚಿಮ ವಲಯದ ಓಕಳಿಪುರ, ಕಾಡುಮಲ್ಲೇಶ್ವರ, ದಯಾನಂದನಗರ, ಶ್ರೀರಾಮಮಂದಿರ ವಾರ್ಡ್‌ಗಳು, ಆರ್.ಆರ್. ನಗರ ವಲಯದ ಲಕ್ಷ್ಮೀದೇವಿ ನಗರ, ಲಗ್ಗೆರೆ, ಜ್ಞಾನಭಾರತಿ, ದಕ್ಷಿಣ ವಲಯದ ಶ್ರೀನಗರ, ಗಿರಿನಗರ, ಗಣೇಶ ಮಂದಿರ, ಯಡಿಯೂರು, ಜಯನಗರ ಪೂರ್ವ, ಮಡಿವಾಳ, ಜೆ.ಪಿ. ನಗರ, ಕೆಂಪಾಪುರ, ಬಾಪೂಜಿನಗರ, ಹೊಂಬೇಗೌಡನಗರ, ಬೊಮ್ಮನಹಳ್ಳಿವಲಯದ ಯಲಚೇನಹಳ್ಳಿ, ಯಲಹಂಕವಲಯದ ಥಣಿಸಂದ್ರ, ಮಹದೇವಪುರ ವಲಯದ ಎಚ್ ಎಎಲ್ ವಿಮಾನ ನಿಲ್ದಾಣ ವಾರ್ಡ್‌ಗಳಲ್ಲಿ ಜ.26ರಿಂದ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳ ಸೇವೆ ಆರಂಭವಾಗಲಿದೆಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Comments 0
Add Comment