ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಬಿಬಿಎಂಪಿ ಆಯುಕ್ತರು, ಬಿಬಿಎಂಪಿ ಅರಣ್ಯಾಧಿಕಾರಿ, ಬಿಡಿಎ ಆಯುಕ್ತರು ಮತ್ತು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿತು.

ಬೆಂಗಳೂರು(ಜು.25): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ವಿವಿಧ ಕಡೆ ವಿರೋಧ, ಆಕ್ಷೇಪ, ಪ್ರತಿಭಟನೆ ಮಾತ್ರ ಕೇಳಿ ಬರುತ್ತಿತ್ತು. ಇದೀಗ ರಾಜಾಜಿನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ಯಾಂಟೀನ್ ವಿಷಯ ಹೈಕೋರ್ಟ್ ಮೆಟ್ಟಿಲೇರಿದೆ.

ರಾಜಾಜೀನಗರದ 3ನೇ ಬ್ಲಾಕ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಜಾಗದಲ್ಲಿ ಮರಗಳನ್ನು ಕತ್ತರಿಸಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕ್ರಮ ಪ್ರಶ್ನಿಸಿ ಗೀತಾ ಮಿಶ್ರಾ ಹಾಗೂ ಇತರ ನಾಲ್ವರು ಸ್ಥಳೀಯರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಬಿಬಿಎಂಪಿ ಆಯುಕ್ತರು, ಬಿಬಿಎಂಪಿ ಅರಣ್ಯಾಧಿಕಾರಿ, ಬಿಡಿಎ ಆಯುಕ್ತರು ಮತ್ತು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದ ಮಂಡಿಸಿ, ರಾಜಾಜೀನಗರದ 3ನೇ ಬ್ಲಾಕ್‌ನಲ್ಲಿ ಬಿಡಿಎಗೆ ಸೇರಿದ್ದ 23.14ಎಕರೆ ಭೂಮಿಯನ್ನು 1949ರಲ್ಲಿ ಅಂದಿನ ನಗರಾಭಿವೃದ್ಧಿ ಪ್ರಾಧಿಕಾರವು, ಕರ್ನಾಟಕ ವಿದ್ಯುತ್ ಮಂಡಳಿಗೆ (ಕೆಇಬಿ) ಮಂಜೂರು ಮಾಡಿತ್ತು. ಇದರಲ್ಲಿ 6 ಎಕರೆ 1 ಗುಂಟೆ ಜಮೀನು ಹೆಚ್ಚುವರಿ ಭೂಮಿ ಎಂದು ಗುರುತಿಸಲಾಗಿತ್ತು. ಈ ಪ್ರದೇಶವು 60 ವರ್ಷಗಳಿಂದ ಖಾಲಿಯಿದೆ. ಇದರಿಂದ ಸ್ಥಳದಲ್ಲಿ ಸ್ವಾಭಾವಿಕವಾಗಿ ಸಾವಿರಾರು ಮರಗಳು ಬೆಳೆದುಕೊಂಡು ಅರಣ್ಯ ಪ್ರದೇಶವಾಗಿ ಮಾರ್ಪಾಟ್ಟಿದೆ. ಹೆಚ್ಚುವರಿಯಿರುವ ಈ 6 ಎಕರೆ 1 ಗುಂಟೆ ಜಾಗವನ್ನು ಬಿಡಿಎ ಈವರೆಗೂ ಕೆಪಿಟಿಸಿಎಲ್‌ನಿಂದ (ಕೆಇಬಿ ಸದ್ಯ ಕೆಪಿಟಿಸಿಎಲ್ ಎಂದಾಗಿದೆ) ಹಿಂಪಡೆದುಕೊಂಡಿಲ್ಲ. ಇದೀಗ ಈ ಜಾಗದಲ್ಲಿ ಬಿಬಿಎಂಪಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿದೆ. ಅದಕ್ಕಾಗಿ ಹಲವು ಮರ ಕಡಿದಿದ್ದು, ತಡೆಗೋಡೆ ತೆರವುಗೊಳಿಸಿದೆ. ಆದ್ದರಿಂದ ಈ 6.1 ಎಕರೆ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಮತ್ತು ಈ ಪ್ರದೇಶವನ್ನು ಬಿಡಿಎಗೆ ಹಿಂತಿರುಗಿಸುವಂತೆ ಕೆಪಿಟಿಸಿಲ್ ಮತ್ತು ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಕೋರಿದರು.

(ಕನ್ನಡಪ್ರಭ ವಾರ್ತೆ)