ಇದು ಭಾರತೀಯ ನಿವಾಸಿಗಳೆಲ್ಲರೂ ಕೂಡ ಆತಂಕಪಡುವಂತಹ ವಿಚಾರವಾಗಿದೆ. ಭಾರತೀಯರ ಆಯಸ್ಸು ವಾಯು ಮಾನಿಲ್ಯದಿಂದ ಒಂದೂವರೆ ವರ್ಷಗಳಷ್ಟು ಕಡಿಮೆಯಾಗಿದೆ.
ಹೂಸ್ಟನ್: ವಾತಾವರಣ ಕಲುಷಿತಗೊಳ್ಳುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ವಾಯು ಮಾಲಿನ್ಯವು ಭಾರತೀಯರ ಜೀವಿತಾವಧಿಯನ್ನು 1.5 ವರ್ಷ ಕಡಿತಗೊಳಿಸುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಅಮೆರಿಕ ಅಧ್ಯಯನ ವರದಿ ಬಹಿರಂಗಪಡಿಸಿದೆ. ಉತ್ತಮ ಗುಣಮಟ್ಟದ ಗಾಳಿಯು ವಿಶ್ವಾದ್ಯಂತ ಮಾನವನ ಜೀವಿತಾವಧಿಯನ್ನು ವೃದ್ಧಿಸುತ್ತದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.
ಕಲುಷಿತ ಹವಾಮಾನವು ಮಾನವನ ಜೀವಿತಾವಧಿ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ವಾಯು ಮಾಲಿನ್ಯ ಹಾಗೂ ಮಾನವ ಜೀವಿತಾವಧಿ ಬಗ್ಗೆ ಇದೇ ಮೊದಲ ಬಾರಿಗೆ ಅಮೆರಿಕದ ಟೆಕ್ಸಾಸ್ ವಿವಿ ಸಂಶೋಧಕರು ಈ ಕುರಿತು ಅಧ್ಯಯನ ಕೈಗೊಂಡಿದ್ದರು. ಕಾರು, ಟ್ರಕ್‌ಗಳು, ಲಾರಿಗಳು, ಕೈಗಾರಿಕೆಗಳು ಹಾಗೂ ವಿದ್ಯುತ್ ಘಟಕಗಳಿಂದ ಬಿಡುಗಡೆಯಾಗುವ ಕಲುಷಿತ ಗಾಳಿಯ ಪ್ರಮಾಣವನ್ನು ಪ್ರತಿ ಚದರ ಕ್ಯೂಬಿಕ್ ಮೀಟರ್‌ಗೆ ಪಿಎಂ 2.5ಕ್ಕೆ ಸೀಮಿತಗೊಳಿಸಿದರೆ ಜನರ ಬದುಕುವ ಅವಧಿ ಸರಾಸರಿ 0.59 ವರ್ಷ ಹೆಚ್ಚಾಗುತ್ತದೆ. ಇಲ್ಲದೇ ಹೋದಲ್ಲಿ ಕಲುಷಿತ ಗಾಳಿಯನ್ನು ಉಸಿರಾಡುವುದರಿಂದ ಹೃದಯಾಘಾತ, ಪಾಶ್ರ್ವವಾಯು, ಉಸಿರಾಟ ತೊಂದರೆ ಹಾಗೂ ಕ್ಯಾನ್ಸರ್ ಸೇರಿದಂತೆ ಇತರ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.
ಇದೇ ವರ್ಷದ ಮೇ ತಿಂಗಳಿನಲ್ಲಿ ಪ್ರಕಟಗೊಂಡ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ವಾಯು ಗುಣಮಟ್ಟದ ದಾಖಲೆ ಪ್ರಕಾರ, ವಿಶ್ವದ ಅತೀ ಮಾಲಿನ್ಯದ 15 ನಗರಗಳ ಪಟ್ಟಿಯಲ್ಲಿ ಭಾರತದ 14 ನಗರಗಳಿದ್ದವು. ಇದರಲ್ಲಿ ಉತ್ತರ ಪ್ರದೇಶದ ಕಾನ್ಪುರ ಮೊದಲ ಸ್ಥಾನದಲ್ಲಿದ್ದರೆ, ವಾರಾಣಸಿ, ಬಿಹಾರದ ಗಯಾ, ಪಟನಾ, ಹರ್ಯಾಣದ ಫರಿದಾಬಾದ್, ರಾಷ್ಟ್ರ ರಾಜಧಾನಿ ದೆಹಲಿ ನಗರಗಳು ಸ್ಥಾನ ಪಡೆದಿದ್ದವು.
