ಬಾಗ್ದಾದ್‌ (ಏ. ೦2): ಇರಾಕ್‌'ನಲ್ಲಿ  2014 ರಲ್ಲಿ ಅಪಹೃತಗೊಂಡು ಹತ್ಯೆಗೀಡಾದ 39 ಭಾರತೀಯರ ಮೃತದೇಹವನ್ನು ಇಂದು ಬಾಗ್ದಾದ್‌ನಿಂದ ಭಾರತಕ್ಕೆ ಮಿಲಿಟರಿ ವಿಮಾನದ ಮೂಲಕ ತರಲಾಗುತ್ತಿದೆ.

ಎಲ್ಲ ಭಾರತೀಯರ ಕಳೇಬರವನ್ನು ತವರಿಗೆ ಕರೆತರಲು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ ಸಿಂಗ್‌ ಬಾನುವಾರ ಇರಾಕ್‌ಗೆ ತೆರಳಿದ್ದರು. ಬಾಗ್ದಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಿಲಿಟರಿ ವಿಮಾನದ ಮೂಲಕ ಮೃತದೇಹವನ್ನು ಭಾರತಕ್ಕೆ  ಕಳುಹಿಸಿ ಕೊಡಲಾಗುತ್ತಿದ್ದು, ಅದು ಸೋಮವಾರ ತಲುಪಲಿವೆ ಎಂದು ಭಾರತೀಯ ರಾಯಭಾರಿ ಪ್ರದೀಪ್‌ ಸಿಂಗ್‌ ರಾಜ್‌ಪುರೋಹಿತ್‌ ತಿಳಿಸಿದ್ದಾರೆ. ಮೃತ ದೇಹಗಳನ್ನು ಸ್ವೀಕರಿಸಲು ಅಮೃತ್‌ಸರದಲ್ಲಿ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಅರಸಿ ಇರಾಕ್‌ಗೆ ತೆರಳಿದ್ದ ಭಾರತೀಯರನ್ನು ಉಗ್ರರು ಮೊಸೂಲ್‌ನಲ್ಲಿ ಅಪಹರಿಸಿದ್ದರು. ಆ ಎಲ್ಲಾ ಭಾರತೀಯರು ಹತ್ಯೆಯಾಗಿದ್ದಾರೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಇತ್ತೀಚೆಗೆ ಸಂಸತ್ತಿನಲ್ಲಿ ದೃಢಪಡಿಸಿದ್ದರು.