ಉದ್ಯೋಗ ನಷ್ಟದಿಂದ ಸೌದಿಯಿಂದ ಅನೇಕ ಕುಟುಂಬ ವಾಪಸ್

Indian workers from Saudi Arabia are coming back home
Highlights

ದೂರದ ಸೌದಿ ಅರೇಬಿಯಾದಲ್ಲಿ ಆರು ತಿಂಗಳ ಹಿಂದೆ ಜಾರಿಗೆ ಬಂದಿರುವ ನೂತನ ಕಾನೂನು ಭಟ್ಕಳದ ಸಾವಿರಾರು ಜನ ತಮ್ಮ  ಉದ್ಯಮ, ಕೆಲಸ ಬಿಟ್ಟು ತವರಿನ ಹಾದಿ ಹಿಡಿಯುವಂತೆ ಮಾಡುತ್ತಿದೆ. 

ಡಿ.ವಿ ಭಟ್ಕಳ 

ಭಟ್ಕಳ :  ದೂರದ ಸೌದಿ ಅರೇಬಿಯಾದಲ್ಲಿ ಆರು ತಿಂಗಳ ಹಿಂದೆ ಜಾರಿಗೆ ಬಂದಿರುವ ನೂತನ ಕಾನೂನು ಭಟ್ಕಳದ ಸಾವಿರಾರು ಜನ ತಮ್ಮ ಉದ್ಯಮ, ಕೆಲಸ ಬಿಟ್ಟು ತವರಿನ ಹಾದಿ ಹಿಡಿಯುವಂತೆ ಮಾಡುತ್ತಿದೆ. ಉತ್ತರ ಕನ್ನಡದ ಈ ಪುಟ್ಟ ಊರಿನ ಸುಮಾರು 5000 ದಷ್ಟು ಮಂದಿ ಉದ್ಯೋಗ ನಿಮಿತ್ತ ಸೌದಿಯಲ್ಲಿ ನೆಲೆಸಿದ್ದು, ಬಹುತೇಕರು ಈಗ  ತವರಿನತ್ತ ಮುಖ ಮಾಡುತ್ತಿದ್ದಾರೆ. 

ಸೌದಿ ಅರೇ ಬಿಯಾದ ದಮ್ಮಾ, ಆಲ್ಕೂಬರ್, ರಹೀಮಾ, ಭಟ್ಕಳದ ಸುಮಾರು 3000 ದಷ್ಟು ಮಂದಿ ನೆಲೆ ಕಂಡುಕೊಂಡಿದ್ದರೆ, ಜೆಡ್ಡಾದಲ್ಲಿ 500 ಹಾಗೂ ರಿಯಾದ್‌ನಲ್ಲಿ 500 ರಷ್ಟು ಮಂದಿ  ಕೆಲಸ ಕಾರ್ಯಗಳಿಗಾಗಿ ನೆಲೆಸಿದ್ದಾರೆ. ಸೌದಿ ಅರೇಬಿಯಾದ ಉಳಿದ ಪ್ರದೇಶಗಳಲ್ಲಿ ಸುಮಾರು 1000 ಮಂದಿ ವಾಸವಾಗಿರುವ  ಮಾಹಿತಿ ಇದೆ. ಹಲವರು ಕುಟುಂಬ ಸಮೇತರಾಗಿ ಅಲ್ಲಿವಾಸಿಸುತ್ತಿದ್ದರೆ, ಉಳಿದ ವರು ಮನೆ ಮಂದಿಯನ್ನು ಸಾಕಲು ಊರು ಬಿಟ್ಟು ಕೆಲಸ ಹುಡುಕಿಕೊಂಡವರು. ಕೆಲವಷ್ಟು ಜನ ದುಡಿದ ಹಣವನ್ನು ಒಟ್ಟುಗೂಡಿಸಿಕೊಂಡು ಉದ್ಯಮ ಸ್ಥಾಪಿಸಿಕೊಂಡಿದ್ದಾರೆ. ಇದೀಗ ಎಲ್ಲರಿಗೂ ಹೊಸ ತೆರಿಗೆ ಕಾನೂನು ಬರೆ ಎಳೆಯಲಾರಂಭಿಸಿದೆ. 

ಏನಿದು ತೆರಿಗೆ ಕಾನೂನು?: ತೈಲ ಸಂಪತ್ತನ್ನು ನಂಬಿಕೊಂಡಿರುವ ಸೌದಿ ಅರೇಬಿಯಾ, ದುಬೈನಂತಹ ರಾಷ್ಟ್ರಗಳಿಗೆ ಈಗ ಪ್ರವಾಸಿಗರೇ ಅನ್ನದಾತರು. ಅವರ ಹಣದಿಂದಲೇ ಆ ದೇಶಗಳು ಆಡಳಿತ ನಡೆಸುತ್ತಿವೆ. ದೇಶದ ಅರ್ಥ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸು ವುದು ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಈಗ ಸೌದಿಯ ವಲಸಿಗರ ಕಾನೂನಿನಲ್ಲಿ ಸಾಕಷ್ಟು ಬದಲಾವಣೆ  ತರಲಾಗುತ್ತಿದೆ. ಈ ಹಿಂದೆ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದ ಪ್ರತಿಯೊಂದು ಕುಟುಂಬಗಳು ಪ್ರತಿ 6 ತಿಂಗಳಿಗೆ 200 ರಿಯಾಲ್ (ಅಜಮಾಸು 4000) ತೆರಿಗೆ ರೂಪದಲ್ಲಿ ಪಾವತಿಸುತ್ತಿದ್ದವು. ಆದರೆ ನೂತನ ತೆರಿಗೆ ಕಾನೂನು ಪ್ರಕಾರ ಕುಟುಂಬದ ಬದಲಾಗಿ ಹೊರಗಿನ ಪ್ರತಿ ವ್ಯಕ್ತಿ ಮಾಸಿಕ 200  ರಿಯಾಲ್ ಪಾವತಿಸಬೇಕಿದೆ. 

ಇದೂ ಸಾಲದೆಂಬಂತೆ ಸ್ವದೇಶಕ್ಕೆ ಬಂದು ಹೋಗಲು ವೀಸಾ ಹೊಂದುವ ನಿಯಮಾವಳಿಗಳಲ್ಲೂ ಬದಲಾವಣೆ ಮಾಡಲಾಗಿದೆ. ಮೊದಲೆಲ್ಲ ಸೌದಿಅರೇಬಿಯಾ ಒಳ ಹಾಗೂ ಹೊರ ಪ್ರವೇಶಕ್ಕೆ ಕಂಪನಿಯ ವೀಸಾ ಪಡೆಯಲು ಪ್ರತ್ಯೇಕ ಹಣ ಪಾವತಿಸಬೇಕಿರಲಿಲ್ಲ. ಆದರೆ ಈಗ ಪ್ರತಿ ವ್ಯಕ್ತಿಗೆ ಮಾಸಿಕ 200 ರಿಯಾಲ್ ಪಾವತಿಸುವುದು ಕಡ್ಡಾಯ. ಅಲ್ಲದೆ, ಭಾರತೀಯರು ಸ್ವದೇಶಕ್ಕೆ ರಜೆ ಕಳೆಯಲು ಬಂದಾಗ ಇಲ್ಲಿದ್ದ ತಿಂಗಳುಗಳನ್ನು ಲೆಕ್ಕ ಹಾಕಿ ಸೌದಿ ಅರೇಬಿಯಾಗೆ ಹಿಂದಿರುಗಿದ ತಕ್ಷಣವೇ ಉದ್ಯೋಗಿ ಶುಲ್ಕ ಪಾವತಿಸಬೇಕು. 

ಉದಾಹರಣೆಗೆ ಭಟ್ಕಳದಲ್ಲಿ ತಿಂಗಳು ಕಾಲ ರಜೆ ಕಳೆದು ಹಿಂದಿರುಗಿದರೆ 200 ರಿಯಾಲ್, 6 ತಿಂಗಳು ಕಳೆದು ಹಿಂದಿರುಗಿದರೆ 1200 ರಿಯಾಲ್ ಪಾವತಿ ಮಾಡಬೇಕು. ಕುಟುಂಬ ಸಮೇತ ಬಂದು ಹೋದರಂತೂ ಪಾವತಿಸಬೇಕಾದ ಹಣ ಭಾರೀ ಪ್ರಮಾಣದಲ್ಲಿ ಇರುತ್ತದೆ. ನಮ್ಮಲ್ಲಿರುವ ಆಧಾರ್ ಕಾಡ್ ನರ್ಂತೆ ಸೌದಿ ಅರೇಬಿಯಾದಲ್ಲಿ ‘ಆಖಾಮಾ’ ಎನ್ನುವ ವೀಸಾ ಹೊಂದಿರುವ ವಿದೇಶದ ವ್ಯಕ್ತಿಯ ಗುರುತಿನ ಚೀಟಿ ಚಲಾವಣೆಯಲ್ಲಿದೆ. 

ಈ ಹಿಂದೆ 550 ರಿಯಾಲ್ ಪಾವತಿಸಿ ಈ ಕಾರ್ಡ್ ಪಡೆಯುತ್ತಿದ್ದರು. ಇದೀಗ ಆಖಾಮ ದರ 5500 ರಿಯಾಲ್! ಅಲ್ಲದೆ ಸೌದಿ ಅರೇಬಿಯಾದಲ್ಲಿರುವ ಟೆಕ್ಸ್‌ಟೈಲ್, ಚಿನ್ನಾಭರಣ ಸೇರಿ ಪ್ರಮುಖ 12 ಉದ್ಯಮಗಳನ್ನು ವಿವಿಧ ಪಟ್ಟಿಗೆ ಸೇರಿಸಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶದ ಜನರನ್ನು ಉದ್ಯೋಗದಿಂದ ವಂಚಿಸಲಾಗುತ್ತಿದೆ. ಹೊರ ದೇಶದ ಯಾರೂ ಆ ಉದ್ಯಮಗಳನ್ನು ನಡೆಸುವಂತಿಲ್ಲ ಎನ್ನುವ ನಿಯಮ ಜಾರಿಗೆ ತರಲಾಗುತ್ತಿದೆ. ಹೀಗಾಗಿ ದುಬಾರಿ ಶುಲ್ಕ, ಹೊಸ ನಿಯಮಾವಳಿಯಿಂದಾಗಿ ಭಾರತೀಯರು ಸೌದಿ ಅರೇಬಿಯಾದಿಂದ ಕಾಲು ಕೀಳುತ್ತಿದ್ದಾರೆ. ರಾಜ್ಯದ ಇತರೆ ಭಾಗಕ್ಕೆ ಹೋಲಿಸಿದರೆ ಕರಾವಳಿಯ ಈ ಪುಟ್ಟ ಊರಿಗೆ ಗಲ್ಫ್ ದೇಶಗಳ ನಂಟು ತುಸು ಜಾಸ್ತಿಯೇ ಇದೆ. 

ಈಗ ಅಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದಾಗಿ ಕಳೆದೊಂದು ವಾರದಲ್ಲಿ 10 ಕ್ಕೂ ಹೆಚ್ಚು ಕುಟುಂಬಗಳು ಸೌದಿ ಅರೇಬಿಯಾ ತೊರೆದು ಭಟ್ಕಳಕ್ಕೆ ವಾಪಸಾಗಿವೆ. ಪ್ರಸ್ತುತ ಅಲ್ಲಿ ಉದ್ಯಮ ವ್ಯವಹಾರಗಳು ಸಂಪೂರ್ಣವಾಗಿ ನೆಲಕಚ್ಚಿವೆ ಎನ್ನುತ್ತಾರೆ ಅಲ್ಲಿ ನೆಲೆಸಿರುವ ಕನ್ನಡಿಗರು. 

loader